ವಿಜಯಪಥ ಸಮಗ್ರ ಸುದ್ದಿ
ಪ್ಯಾರಿಸ್: ಉಕ್ಕು ಕಬ್ಬಿಣಕ್ಕು ಬಿಡಿಸಲಾರದ ಸಂಬಂಧ ಆ ಸಂಬಂಧವನ್ನೇ ಆಧಾರವಾಗಿಟ್ಟುಕೊಂಡು ಅನೇಕ ಆವಿಷ್ಕಾರಗಳು ನಡೆದಿವೆ. ಈಗ ಅಂಥ ಉಕ್ಕನ್ನೇ ಬಳಸಿ ವಿಮಾನವನ್ನೇ ಆರು ಅಡಿ ಎತ್ತರಕ್ಕೆ ಸೆಳೆದು ನಿಲ್ಲಿಸಬಲ್ಲ ಜಗತ್ತಿನ ಬೃಹತ್ ಆಯಸ್ಕಾಂತವೊಂದನ್ನು ಪ್ಯಾರಿಸ್ ನಲ್ಲಿ ಸಿದ್ದಗೊಳಿಸಲಾಗುತ್ತಿದೆ.
ಈ ಆಯಸ್ಕಾಂತ ಬರೋಬರಿ 59 ಅಡಿ ಎತ್ತರ ಮತ್ತು 14 ಅಡಿ ಅಗಲ ಹೊಂದಿದ್ದು, ಫ್ರಾನ್ಸ್ ನ ದಕ್ಷಿಣ ಭಾಗದ ಸೇಂಟ್ ಪೌಲ್ ಡ್ಯೂರಾನ್ಸ್ ಎಂಬಲ್ಲಿ ನಿರ್ಮಿಸಲಾಗುತ್ತಿದೆ.
ಆಯಸ್ಕಾಂತವನ್ನು ಸಿದ್ಧಗೊಳಿಸುವ ಹೊಣೆ ಹೊತ್ತಿರುವ ಜನರಲ್ ಆಟೋಮಿಕ್ಸ್ ಸಂಸ್ಥೆ ಪ್ರಕಾರ, ಆಯಸ್ಕಾಂತ ನಿರ್ಮಾಣದ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಅದಕ್ಕೆ ‘ಸೆಂಟ್ರಲ್ ಸೊಲೊನಾಯ್ಡ’ ಎಂದು ಕರೆಯಲಾಗುತ್ತದೆ.
ಈ ಆಯಸ್ಕಾಂತವು ಭೂಮಿಯ ಗುರುತ್ವಾಕರ್ಷಣ ಶಕ್ತಿಗಿಂತ 2,80,000 ಪಾಲು ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಫ್ಯೂಷನ್ ಎನರ್ಜಿ ಸೃಷ್ಟಿಸುವ ನಿಟ್ಟಿನಲ್ಲಿ ಅದನ್ನು ಬಳಕೆ ಮಾಡಲಾಗುವುದು. ಜಗತ್ತಿನ ಅತ್ಯಂತ ದೊಡ್ಡ ಬದಲಿ ಇಂಧನ ಯೋಜನೆ (ಐಟಿಇಆರ್) ಇದಾಗಿದ್ದು, ಭಾರತ, ಚೀನಾ, ಐರೋಪ್ಯ ಒಕ್ಕೂಟ, ಅಮೆರಿಕ, ಜಪಾನ್, ಕೊರಿಯಾ ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಿವೆ.