ರಾಯಚೂರು: ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನಲ್ಲಿ ಸಂಭವಿಸಿದೆ.
ಸಂತೇ ಕಲ್ಲೂರು ಗ್ರಾಮದಲ್ಲಿ ಭಾವೈಕ್ಯತೆಯ ಮೊಹರಂ ಮೆರವಣಿಗೆ ನಡೆಯುತ್ತಿತ್ತು. ದೇವರಿದ್ದ ಛತ್ರಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಹುಸೇನ್ ಸಾಬ್ (50) ಮತ್ತು ಹುಲಿಗೆಮ್ಮ (23) ಎಂಬುವರಿಗೆ ತೀವ್ರ ಗಾಯವಾಗಿದೆ.
ತಕ್ಷಣ ಗಾಯಾಳುಗಳನ್ನು ಲಿಂಗಸಗೂರು ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮಾರ್ಗ ಮಧ್ಯದಲ್ಲಿ ಹುಸೇನ್ ಮತ್ತು ಹುಲಿಗೆಮ್ಮ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.