ವಿಜಯಪಥ ಸಮಗ್ರ ಸುದ್ದಿ
ಜೆರುಸಲೇಂ: ಇಸ್ರೇಲ್ ನಲ್ಲಿ ತಡರಾತ್ರಿವರೆಗೆ ನಡೆದ ಧಾರ್ಮಿಕ ಸಮಾರಂಭದ ವೇಳೆ ಕಾಲ್ತುಳಿತ ದುರಂತ ಸಂಭವಿಸಿದ್ದು 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 103 ಮಂದಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಸ್ಥಳಿಯ ಪತ್ರಿಕೆಗಳು ವರದಿ ಮಾಡಿವೆ.
ಲಾಗ್ ಬೋಮರ್ ಆಚರಿಸಲು ಇಸ್ರೇಲ್ ಮೌಂಟ್ ಮೆರೂರ್‌ನಲ್ಲಿ ಸಾಮೂಹಿಕ ಸಭೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಂಭ್ರಮದ ವೇಳೆ ಮೆಟ್ಟಿಲುಗಳ ಮೇಲಿಂದ ಜನರು ಒಬ್ಬರ ಮೇಲೊಬ್ಬರು ಬಿದ್ದಿರುವುದು ದುರಂತಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಗ್ಯ ಅಧಿಕಾರಿಗಳು ನೀಡಿದ್ದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಘಟನಾಸ್ಥಳದಲ್ಲಿ ಅಧಿಕ ಜನಸಮೂಹ ನೆರೆದಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನು ದರಂತದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಇದೊಂದು ಭೀಕರ ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸಲಹೆ ನೀಡಿದ್ದಾರೆ.