ಮಂಡ್ಯ: ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಹಲವಾರು ಕೆರೆಗಳನ್ನು ನಿರ್ಮಿಸಿರುವ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.
ಕಾಮೇಗೌಡ ಅವರ ಮನವಿಗೆ ಸ್ಪಂದಿಸಿರುವ ಯಡಿಯೂರಪ್ಪ ಕೆರೆಗಳ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ನಮಗೆ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡುವುದಾಗಿ ಮತ್ತು ಮಗನಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡುವುದಾಗಿ ಸಿಎಂ ಆಶ್ವಾಸನೆ ನೀಡಿದ್ದದಾರೆ ಎಂದು ಕಾಮೇಗೌಡರು ತಿಳಿಸಿದರು.
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಜತೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ವಿಡಿಯೋ ಕರೆ ಮಾಡಿ ಮಾತುಕತೆ ನಡೆಸಿದ್ದರು.
ಇನ್ನು ಕಾಮೇಗೌಡರ ಈ ಸಾಧನೆ ದೇಶಾದ್ಯಂತ ಪ್ರಶಂಸೆಗೆ ವ್ಯಕ್ತವಾಗುತ್ತಿದ್ದು, ಅವರಿಗೆ ಕೇಂದ್ರ ಸರ್ಕಾರದಿಂದ ಕೊಡಮಾಡುವ ವಿವಿಧ ಪ್ರಶಸ್ತಿಗಳನ್ನು ನೀಡಬೇಕು ಎಂಬ ಒತ್ತಾಯವು ನಾಗರಿಕ ವಲಯದಿಂದ ಕೇಳಿ ಬರುತ್ತಿದೆ.