ಮೈಸೂರು: ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಮೈಸೂರು ಭಾಗದಲ್ಲಿ ಕೆಲ ನೌಕರರನ್ನು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಚರ್ಚಿಸದೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಆದ್ದರಿಂದ ಅಡ್ವೈಸರಿ ಸಮಿತಿ ಸಭೆ ಕರೆದು ಮತ್ತೊಮ್ಮೆ ಟೆಂಡರ್ ಕರೆಯುವಂತೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ತಸ್ನೀಂ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಾಮಾನ್ಯ ಕೌನ್ಸಿಲ್ ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ಆಯುಕ್ತ ಗುರುದತ್ ಹೆಗಡೆ ಪ್ರತಿಕ್ರಿಯಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಲಾಗಿತ್ತು. ಕೆಲವು ದಿನಗಳ ಕಾಲ ಕೌನ್ಸಿಲ್ ನಡೆಯದ ಕಾರಣ ಅರ್ಜಿ ಆಹ್ವಾನಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ವಿವರಿಸಿದರು.
ನೇಮಕವಾಗಿರುವ 106 ನೌಕರರ ಪೈಕಿಯಲ್ಲಿ 47 ಮಂದಿ ಕಬಿನಿಯಲ್ಲಿ, 17 ಮಂದಿ ವಾಣಿವಿಲಾಸ ನೀರು ಸರಬರಾಜು ನಿಗಮದಲ್ಲಿ ಹಾಗೂ ಹೊಂಗಳ್ಳಿಯಲ್ಲಿ 4 ಮಂದಿ ಸೇರಿದಂತೆ 68 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳುವುದರಿಂದ ಅನೇಕ ಕೆಲಸವು ಕುಂಠಿತವಾಗುತ್ತದೆ. ಈ ಬಗ್ಗೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಯುಜಿ ಕೇಬಲ್ ಅಳವಡಿಕೆಯಲ್ಲಿ ಅವೈಜ್ಞಾನಿಕ ಪದ್ಧತಿಯನ್ನು ಅನುಸರಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅಪಾಯವಾಗುವ ಸಾಧ್ಯತೆ ಇದೆ. ಈ ಸಂಬಂಧ ಮಹಾಪೌರರು ಕ್ರಮವಹಿಸಬೇಕೆಂದು ಮಹಾನಗರ ಪಾಲಿಕೆ ಸದಸ್ಯರು ಮನವಿ ಮಾಡಿದರು.
ಮೇಯರ್ ತಸ್ನೀಂ ಅವರು ಪ್ರತಿಕ್ರಿಯಿಸಿ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು, ಆಯುಕ್ತರು ಹಾಗೂ ವರ್ಕ್ ಸಮಿತಿ ಸದಸ್ಯರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಉಪಮೇಯರ್ ಸಿ.ಶ್ರೀಧರ್, ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.