ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ತೀವ್ರ ಸ್ವರೂಪ ಪಡೆದುಕೊಂಡು ಸಾವು ನೋವುಗಳು ಹೆಚ್ಚಾಗುತ್ತಿದ್ದ ವೇಳೆ ಶಾಸಕ ಸತೀಶ್ ರೆಡ್ಡಿ ಬೆಡ್ ಬ್ಲಾಕಿಂಗ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆರೋಪ ತಳ್ಳಿಹಾಕಿರುವ ಶಾಸಕರು ಇಂದು ಸ್ವಪಕ್ಷೀಯರ ವಿರುದ್ಧವೇ ಪಕ್ಷದ ನಾಯಕರಿಗೆ ದೂರು ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಬೆಡ್ ಬ್ಲಾಕಿಂಗ್ ವಿಚಾರವಾಗಿ ನಾನು ಪಕ್ಷದ ಹಿರಿಯರಿಗೆ ತಿಳಿಸಿದ್ದೇನೆ. ಮೌಖಿಕವಾಗಿ ಅಲ್ಲದೇ ಲಿಖಿತವಾಗಿಯೂ ದೂರು ನೀಡಿದ್ದೇನೆ. ಹಿರಿಯ ನಾಯಕರು ಕೂಡ ಕರೆದು ಮಾತನಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ನಾಯಕರಿಗೆ ಬೆಡ್ ಬ್ಲಾಕಿಂಗ್ ವಿಚಾರವಾಗಿ ಆಗಿರುವ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ. ಮುಂದಿನ ದಿನಗಳಲ್ಲಿ ನಾನೇ ಸುದ್ದಿಗೋಷ್ಠಿ ಕರೆದು ಎಲ್ಲ ವಿಚಾರವನ್ನು ಪತ್ರಕರ್ತರಿಗೆ ತಿಳಿಸುತ್ತೇನೆ ಎಂದು ಸತೀಶ್ ರೆಡ್ಡಿ ಹೇಳಿದರು.
ಈ ಮಧ್ಯೆ ಸ್ವಪಕ್ಷೀಯರ ವಿರುದ್ದವೇ ಶಾಸಕ ಸತೀಶ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರದ ಸಚಿವರ ವಿರುದ್ದ ಘಟನೆ ಹಿಂದೆ ನಮ್ಮವರದ್ದೇ ಷಡ್ಯಂತ್ರ ಇದೆ ಎಂದು ಸತೀಶ್ ರೆಡ್ಡಿ ಬಿಜೆಪಿ ಹಿರಿಯ ನಾಯಕರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಸ್ವಪಕ್ಷೀಯರ ಕೈವಾಡದ ಬಗ್ಗೆ ದೂರು ನೀಡಿದ್ದು, ಮುಂದಿನ ದಿನಗಳಲ್ಲಿ ದೆಹಲಿಯ ಅಂಗಳಕ್ಕೂ ಈ ದೂರನ್ನು ಒಯ್ಯುವ ತಯಾರಿಯಲ್ಲಿ ಶಾಸಕರು ಇದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಸತೀಶ್ ರೆಡ್ಡಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಘಟನೆ ಹಿಂದೆ ನಮ್ಮವರದ್ದೇ ಷಡ್ಯಂತ್ರ ಇದೆ ಎಂದು ಕೆಲವು ಈಗಾಗಲೇ ದೂರಿದ್ದಾರೆ. 4,500 ಬೆಡ್ ಹಗರಣ ಬಯಲಿಗೆ ಎಳೆದಿದ್ದೇವೆ. ಆದರೆ ಈ ದಂಧೆಯನ್ನು ಬಯಲಿಗೆಳೆದ ನಮ್ಮ ಮೇಲೆಯೇ ಆರೋಪ ಮಾಡಿರುವುದು ಬಹಳ ಬೇಸರ ಮೂಡಿಸಿದೆ. ಈ ದಂಧೆಯನ್ನು ಬೊಮ್ಮನಹಳ್ಳಿ ಬಾಬು ಮಾಡಿದ್ದಾನೆ ಅಂತಾರೆ.
ಆದರೆ ಬಂಧಿತ ಬಾಬು ಜತೆ ನನಗೆ ಸಂಪರ್ಕವೇ ಇಲ್ಲ. ಆತ ಯಾರಿಗೆ ಆಪ್ತ? ನನ್ನ ಜೊತೆ ಕನಿಷ್ಠ ಆರು ತಿಂಗಳ ಹತ್ತಿರ ಇರಬೇಕು ಕನಿಷ್ಠ ಕರೆಯಾದರು ಮಾಡಬೇಕು. ಆತನ ಜತೆ ಎಲ್ಲಿ ಸಂಪರ್ಕ ಇದೆ ನನಗೆ? ಎಂದು ಸತೀಶ್ ರೆಡ್ಡಿ ಪ್ರಶ್ನಿಸಿದ್ದಾರೆ.
ಸಂಬಂಧ ಇಲ್ಲದೇ ಇರದ ವ್ಯಕ್ತಿಗಳ ಜೊತೆ ನನ್ನ ಹೆಸರ ಜೋಡಿಸಿದ್ದಾರೆ. ನಾವು 4,500 ಬೆಡ್ ವಿಚಾರ ಎತ್ತಿದ್ದು ಸರ್ಕಾರದಲ್ಲಿ ಕೆಲವರಿಗೆ ಮುಜುಗರ ಆಗಿದೆ. ಕೆಲ ಅಧಿಕಾರಿಗಳು ಮಿಸ್ ಗೈಡ್ ಮಾಡಿ ಕೋಟ್ಯಂತರ ಅವ್ಯವಹಾರ ಮಾಡಿದ್ದಾರೆ. ಅಂಥವರ ವಿರುದ್ಧ ಕ್ರಮ ಆಗಬೇಕು. ನನ್ನ ಅಭಿವೃದ್ಧಿ ಸಹಿಸಲು ಸಾಧ್ಯವಾಗದೇ ಈ ರೀತಿ ಮಾಡಿದ್ದಾರೆ. ಅವರಿಗೆ ಭಗವಂತ ಅವರಿಗೆ ಒಳ್ಳೇದು ಮಾಡಲಿ. ನಾನು 20 ವರ್ಷದ ರಾಜಕಾರಣದಲ್ಲಿ ತಪ್ಪು ಮಾಡಿಲ್ಲ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.