ಬೆಂಗಳೂರು: ಕಾಂಗ್ರೆಸ್‌ನ ಚಾಮರಾಜಪೇಟೆ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಂದು ಬೆಳಗ್ಗೆ ಐಟಿ ದಾಳಿ ನಡೆದಿದೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿಯಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ನಡುವೆಯೇ ಜಮೀರ್ ನಿವಾಸದ ಮೇಲೆ ಐಟಿ ದಾಳಿಗೆ ಐಎಂಎ ಪ್ರಕರಣದ ಲಿಂಕ್ ಇದೆಯಾ ಎಂಬ ಅನುಮಾನ ಮೂಡಿದೆ. ಐಎಂಎ ವಂಚನೆ ಪ್ರಕರಣದಲ್ಲಿ ಜಮೀರ್ ಅವರ ಹೆಸರು ಸಹ ಕೇಳಿ ಬಂದಿತ್ತು. ಐಎಂಎ ಪ್ರಕರಣದ ರೂವಾರಿ ಮನ್ಸೂರ್ ಅಲಿ ಖಾನ್ ಜತೆ ಜಮೀರ್ ಅಹ್ಮದ್ ವ್ಯವಹಾರ ನಡೆಸಿದ್ದಕ್ಕೆ ಐಟಿ ದಾಳಿ ನಡೆದಿದೆಯಾ ಎಂಬ ಪ್ರಶ್ನೆಯೊಂದು ಸದ್ಯ ಚಾಲ್ತಿಯಲ್ಲಿದೆ.
ಮನ್ಸೂರ್ ಅಲಿ ಖಾನ್ ಗೆ ಜಮೀರ್ ಅಹ್ಮದ್ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿಯ ಬಡಾವಣೆ ಮಾರಾಟ ಮಾಡಿದ್ದರು. ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ತಮಗೆ ಲಭ್ಯವಾದ ಕೆಲ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದ ಬೆನ್ನಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ.
ಶಾಸಕರಾಗಿರುವ ಜಮೀರ್ ಅಹ್ಮದ್ ವಿದೇಶದಲ್ಲಿ ಕ್ಯಾಸಿನೋ ಬಾರ್ ಗಳು, ಸೇರಿದಂತೆ ಬೇರೆ ಬೇರೆ ವ್ಯವಹಾರಗಳು ನಡೆಸ್ತಿರೊ ಬಗ್ಗೆ ಮಾಹಿತಿ ಐಟಿ ಇಲಾಖೆಗೆ ಲಭ್ಯವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಮೀರ್ ನಿವಾಸ, ಕಚೇರಿ, ಫ್ಲ್ಯಾಟ್‌ನಲ್ಲಿ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ, ಶೋಧ ನಡೆಸುತ್ತಿದ್ದಾರೆ. ಮನೆ, ಫ್ಲ್ಯಾಟ್, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ರೇಡ್ ಮಾಡಲಾಗಿದೆ.