ನ್ಯೂಡೆಲ್ಲಿ: ಕೋವಿಡ್ ಲಸಿಕೆ ಪಡೆಯಲು ಯಾರೂ ಹಿಂಜರಿಯಬಾರದು. ದಯವಿಟ್ಟು ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಮಾತನಾಡಿದ ಅವರು, ದೇಶದ ಲಸಿಕಾ ಅಭಿಯಾನವನ್ನು ಕೊಂಡಾಡಿದ್ದಾರೆ.
ನಾವು ದೇಶವಾಸಿಗಳು ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನಾವು ಒಟ್ಟಾಗಿ ಅನೇಕ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಕೆಲವೇ ದಿನಗಳ ಹಿಂದೆ ನಮ್ಮ ದೇಶವು ಅಭೂತಪೂರ್ವ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.
ಲಸಿಕೆ ವಿಚಾರದಲ್ಲಿ ದಯವಿಟ್ಟು ಭಯವನ್ನು ತೊಡೆದುಹಾಕಿ. ಲಸಿಕೆ ಹಾಕಿಸಿದ ಬಳಿಕ ಕೆಲವೊಮ್ಮೆ ಜನರಿಗೆ ಜ್ವರ ಬರಬಹುದು. ಆದರೆ, ಅದು ತುಂಬಾ ಸೌಮ್ಯವಾಗಿರುತ್ತದೆ.ಕೆಲವೇ ಗಂಟೆಗಳವರೆಗೆ ಇರುತ್ತದೆ. ಲಸಿಕೆಯನ್ನು ತಪ್ಪಿಸುವುದು ತುಂಬಾ ಅಪಾಯಕಾರಿ. ನೀವು ನಿಮ್ಮನ್ನು ಅಪಾಯಕ್ಕೆ ತಳ್ಳುವುದು ಮಾತ್ರವಲ್ಲದೆ. ನಿಮ್ಮ ಕುಟುಂಬ ಮತ್ತು ಇಡೀ ಹಳ್ಳಿಯನ್ನೂ ಕೂಡ ಅಪಾಯಕ್ಕೆ ದೂಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಮೃತ ಮಹೋತ್ಸವದೊಂದಿಗೆ ಯಾವ ರೀತಿಯಲ್ಲಿ ಸೇರಲು ಸಾಧ್ಯವಾಗುತ್ತದೆಯೋ ಖಂಡಿತವಾಗಿಯೂ ಸೇರಿಕೊಳ್ಳಿ ಎನ್ನುವುದು ನಿಮ್ಮೆಲ್ಲರಲ್ಲಿ ನನ್ನ ಮನವಿ.
ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಸಾಕ್ಷಿಯಾಗುತ್ತಿರುವುದು ನಮ್ಮ ಸೌಭಾಗ್ಯ.ಮುಂದಿನ ಮನದ ಮಾತು ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವದ ಸಿದ್ಧತೆಯ ಬಗ್ಗೆ ಮಾತನಾಡೋಣ. ನೀವೆಲ್ಲರೂ ಆರೋಗ್ಯವಾಗಿರಿ, ಕೊರೊನಾ ಸಂಬಂಧಿತ ನಿಯಮಗಳ ಪಾಲನೆ ಮಾಡುತ್ತಾ ಮುಂದೆ ಸಾಗಿ, ನಿಮ್ಮ ಹೊಸ ಹೊಸ ಪ್ರಯತ್ನಗಳಿಂದ ದೇಶಕ್ಕೆ ಹೊಸ ವೇಗ ತುಂಬುತ್ತಿರಿ. ಈ ಶುಭಾಕಾಂಕ್ಷೆಗಳೊಂದಿಗೆ, ಅನೇಕಾನೇಕ ಧನ್ಯವಾದ ಎಂದು ತಿಳಿಸಿದರು.
21ನೇ ಶತಮಾನದಲ್ಲಿ ಜನಿಸಿದ ನನ್ನ ಯುವ ಸ್ನೇಹಿತರು 19ನೇ ಮತ್ತು 20ನೇ ಶತಮಾನದ ಸ್ವಾತಂತ್ರ್ಯ ಸಂಗ್ರಾಮವನ್ನು ಜನರ ಮುಂದಿಡುವ ಕಾರ್ಯ ನಿರ್ವಹಿಸಿದ್ದಾರೆ. ಇವರೆಲ್ಲರೂ MyGovನಲ್ಲಿ ಇದರ ಪೂರ್ಣ ವಿವರವನ್ನು ಕಳುಹಿಸಿದ್ದಾರೆ. ಇವರು ಹಿಂದೀ, ಇಂಗ್ಲೀಷ್, ತಮಿಳು, ಕನ್ನಡ, ಬಂಗಾಳಿ, ತೆಲುಗು, ಮರಾಠಿ, ಮಲಯಾಳಂ, ಗುಜರಾತಿ, ಹೀಗೆ ದೇಶದ ವಿವಿಧ ಭಾಷೆಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮ ಕುರಿತು ಬರೆಯುತ್ತಾರೆ.
ಒಬ್ಬರು ಸ್ವಾತಂತ್ರ್ಯ ಸಂಗ್ರಾಮದ ನಂಟು ಹೊಂದಿರುವ, ತಮ್ಮ ಸುತ್ತಮುತ್ತಲಿನ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕಿದರೆ ಮತ್ತೊಬ್ಬರು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ. ಇದೊಂದು ಉತ್ತಮ ಆರಂಭವಾಗಿದೆ ಎಂದರು.