ದಾವಣಗೆರೆ: ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ದೇಶದ ಪ್ರತಿಯೊಬ್ಬರೂ ಸಂಭ್ರಮದಿಂದ ಆಚರಿಸಿದರು. ಆದರೆ ಕಾಂಗ್ರೆಸ್ ನಿರುದ್ಯೋಗ ದಿನಾಚರಣೆ ಎಂದು ಆಚರಣೆ ಮಾಡಿದೆ. ಕಾಂಗ್ರೆಸ್ ನಲ್ಲಿ ಮಾತ್ರ ನಿರುದ್ಯೋಗಿಗಳು ಇದ್ದಾರೆ. ಮುಂದೆ ಬರುವ ಎಲ್ಲ ಚುನಾವಣೆಯಲ್ಲಿ ಹೇಳ ಹೆಸರಿಲ್ಲದೆ ಕಾಂಗ್ರೆಸ್ ಹೋಗುತ್ತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಶಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇತ್ತ ಪ್ರಧಾನಿ ಜನ್ಮದಿನ ಆಚರಣೆ ಮಾಡುತ್ತಿದ್ದರೆ ಅತ್ತ ನಿರುದ್ಯೋಗ ದಿನ ಆಚರಣೆ ಮಾಡಿದ್ದಾರೆ ಅಂದರೆ ಇದರೆ ಅರ್ಥ ಕಾಂಗ್ರೆಸ್ ನಲ್ಲಿ ಮಾತ್ರ ನಿರುದ್ಯೋಗಿಗಳು ಇದ್ದಾರೆ ಎಂದಲ್ಲವೇ ಎಂದು ವ್ಯಂಗ್ಯವಾಡಿದರು.
ಇನ್ನು ನಮ್ಮ ರಾಜ್ಯದಲ್ಲೂ ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆಯದು. ಗುಜರಾತ್ ಮಾದರಿ ಸಂಪುಟ ರಚನೆ ಮಾಡುವ ನಿಟ್ಟಿನಲ್ಲಿ ರೇಣುಕಾಚಾರ್ಯ ಅವರು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಅವರ ಹೇಳಿಕೆಯಲ್ಲಿ ದುರುದ್ದೇಶವಿಲ್ಲ ಎಂದು ಶಾಸಕರ ಹೇಳಿಕೆ ಸಮರ್ಥಿಸಿಕೊಂಡರು.
ಮಾಜಿ ಸಿಎಂ ಯಡಿಯೂರಪ್ಪ ಪಕ್ಷವನ್ನು ಕಟ್ಟಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸ್ಪಷ್ಟ ಬಹುಮತದಿಂದ ಪಕ್ಷ ಅಧಿಕಾರಕ್ಕೆ ತರಲು ಪ್ರವಾಸ ಮಾಡಲಿದ್ದಾರೆ. ಕೋರ್ ಕಮಿಟಿಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆಯಾಗಿದೆ ಎಂದರು.
ಹಾನಗಲ್ ಸಿಂದಗಿ ಉಪಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ರಾಜ್ಯ ಜನರಿಗೆ ತಿಳಿಸಬೇಕು ಎಂದರು.
ದೇವಾಲಯಗಳನ್ನು ಒಡೆಯುತ್ತಿರುವ ವಿಚಾರವಾಗಿ, ದೇವಾಲಯಗಳ ಹೆಸರಿನಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ. ಅಧಿಕಾರಿಗಳು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರವು ಮಾಡಬೇಕಿತ್ತು. ಆದರೆ ಅದು ನಡೆಯದೆ ತಪ್ಪಾಗಿದೆ. ಈಗ ಕಾಂಗ್ರೆಸ್ ಗೆ ಇದ್ದಕ್ಕಿದ್ದಂತೆ ಹಿಂದೂಗಳ ಮೇಲೆ ಪ್ರೀತಿ ಬಂದಿದೆ ಎಂದು ಟೀಕಿಸಿದರು.