ಶಿವಮೊಗ್ಗ: ಸೇವಾ ಭದ್ರ ತೆಯೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ, ಗುತ್ತಿಗೆ ಹಾಗೂ ಹೊರ ಗುತ್ತಿಗೆನೌಕರರ ಸಂಘ (ಬಿಎಂಎಸ್ ಸಂಯೋಜಿತ) ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 8 ದಿನಗಳಿಂದ ಗೌರವಯುತವಾಗಿ ಕೆಲಸ ಮಾಡುತ್ತಲೇ ಮುಷ್ಕರ ಮಾಡುತ್ತಿದ್ದೇವೆ. ಆದರೂ ಸರ್ಕಾರ ಯಾವುದೇ ಭರವಸೆ ನೀಡಿಲ್ಲ ಹಾಗಾಗಿ ನಾವು ಸಾಂಕೇತಿಕ ಮುಷ್ಕರದಿಂದ ಹೊರ ಬಂದು ಇಂದಿನಿಂದ ಪ್ರತಿದಿನ ಮುಷ್ಕರ ಮುಂದುವರಿಸುತ್ತೇವೆ ಎಂದು ಪ್ರತಿಭಟನಾ ನಿರತರು ಹೇಳಿದರು.
ಕೊರೊನಾದಂತಹ ಸಂದರ್ಭದಲ್ಲಿಯೂ ಕೂಡ ನಮ್ಮ ನೌಕರರು ಕೆಲಸ ಮಾಡಿದ್ದಾರೆ. 15ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಅವರಿಗೆ ಕೋವಿಡ್ ಪರಿಹಾರವೂ ಸಿಕ್ಕಿಲ್ಲ. ಪ್ರಾಣ ಪಣಕ್ಕಿಟ್ಟು ಕೆಲಸ ನಿರ್ವಹಿಸಿದ ನೌಕರರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಹೊರಟಿರುವುದು ಅತ್ಯಂತ ಖೇಧಕರ ಮತ್ತು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿನಾಕಾರಣ ಕೆಲಸದಿಂದ ತೆಗೆಯಬಾರದು, ವಿಶೇಷ ಸೇವಾಭತ್ಯೆ ನೀಡಬೇಕು ಎಂಬುದು ಸೇರಿದಂತೆ ಸುಮಾರು 14 ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷೆ ಡಾ.ಹೇಮಲತಾ ವಹಿಸಿದ್ದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರಿಗೆ ಮನವಿಸಲ್ಲಿಸಿದರು.