ಬೆಂಗಳೂರು: ಸೆಲ್ಫಿ ತೆಗೆಯಿರಿ, ಭಾರತೀಯ ಅಥ್ಲೆಟ್ ಗಳನ್ನು ಪ್ರೋತ್ಸಾಹಿಸಿ ಎಂದು ರೈಲ್ವೆ ಇಲಾಖೆಯಿಂದ ‘ಚೀರ್ ಫಾರ್ ಇಂಡಿಯಾ’ ಅಭಿಯಾನ ಆರಂಭವಾಗಿದೆ.
ಹೌದು ಇನ್ನು ಕೆಲವೇ ದಿನಗಳಲ್ಲಿ ಟೋಕಿಯೋ ಒಲಿಂಪಿಕ್ಸ್ ಆರಂಭವಾಗಲಿದೆ. ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳನ್ನು ಉತ್ತೇಜಿಸಲು ನೈರುತ್ಯ ರೈಲ್ವೆ ವಲಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್ ಗಳನ್ನು ರಚಿಸಿದೆ. ಇಲ್ಲಿ ನಿಂತುಕೊಂಡು ಸಾರ್ವಜನಿಕರು ಸೆಲ್ಫಿ ಅಥವಾ ಫೋಟೋ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಂತೆ ಕೋರಲಾಗಿದೆ.
ಕೋವಿಡ್-19 ಮಧ್ಯೆ ಕ್ರೀಡಾ ಸ್ಫೂರ್ತಿ ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಒಲಿಂಪಿಕ್ಸ್ ಕ್ರೀಡಾಪಟುಗಳಲ್ಲಿ ಉತ್ಸಾಹ ಹೆಚ್ಚಿಸಲು ಹಮ್ಮಿಕೊಂಡಿರುವ ಈ ಅಭಿಯಾನ ಹಲವು ಕ್ರೀಡಾಭಿಮಾನಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕಂಟೋನ್ಮೆಂಟ್, ಯಶವಂತಪುರ, ಕೆ ಆರ್ ಪುರಂ ರೈಲು ನಿಲ್ದಾಣ, ಮೈಸೂರು ರೈಲು ನಿಲ್ದಾಣ ಸೇರಿದಂತೆ ರಾಜ್ಯದಲ್ಲಿರುವ ಪ್ರಮುಖ ರೈಲು ನಿಲ್ದಾಣಗಳಲ್ಲಿ ಈ ಸೆಲ್ಫಿ ಪಾಯಿಂಟ್ ಗಳನ್ನು ಅಳವಡಿಸಲಾಗಿದೆ.