ಟೋಕಿಯೋ: ವಿಶ್ವದ ಅತಿದೊಡ್ಡ ಕ್ರೀಡಾ ಸಮಾರಂಭ ಒಲಿಂಪಿಕ್-2020 ಇಂದು (ಭಾನುವಾರ) ಸಂಜೆ ಪೂರ್ಣಗೊಳ್ಳಲಿದೆ.
ಟೋಕಿಯೋದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಸಂಜೆ 4.30ಕ್ಕೆ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ತೆರೆ ಬೀಳಲಿದೆ.
ಭಾರತದ ಪರವಾಗಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಬಜರಂಗ್ ಪುನಿಯಾ ದೇಶದ ಧ್ವಜವನ್ನು ಹೊತ್ತು ಸಾಗಲಿದ್ದಾರೆ. ಕಳೆದ 17 ದಿನಗಳಲ್ಲಿ ಟೋಕಿಯೋದ ರಾಷ್ಟ್ರೀಯ ಕ್ರೀಡಾಂಗಣ ವೇದಿಕೆ ಹಲವು ಕ್ರೀಡಾ ಮೆರುಗು, ಪದಕಗಳನ್ನು ಗೆದ್ದು ಹೆಮ್ಮೆಯಿಂದ ಬೀಗಿದ ಕ್ರೀಡಾಪಟುಗಳ ಆನಂದಭಾಷ್ಪ, ಪದಕದಿಂದ ವಂಚಿತರಾದ ಕ್ರೀಡಾಪಟುಗಳ ಕಣ್ಣೀರಿಗೆ ವೇದಿಕೆಯಾಗಿದೆ.
ಸಂಜೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಕೋವಿಡ್-19 ನಿರ್ಬಂಧಗಳೊಂದಿಗೆ ಹಲವು ಪ್ರದರ್ಶನಗಳು ನೆರವೇರಲಿವೆ. ಅದ್ದೂರಿ ಸಮಾರೋಪ ಸಮಾರಂಭವು ಸೋನಿ ಟೆನ್, ಸೋನಿ ಲಿವ್ ಟಿವಿಗಳಲ್ಲಿ ಪ್ರಸಾರವಾಗಲಿದೆ.
ಇನ್ನು ಹಲವು ತೃತೀಯ ಲಿಂಗಿಗಳು ಈ ಬಾರಿಯ ಒಲಿಂಪಿಕ್ ನಲ್ಲಿ ಪ್ರವೇಶ ಪಡೆದಿದ್ದರು ಎನ್ನುವುದು ಮತ್ತೊಂದು ವಿಶೇಷ. ಕೋವಿಡ್-19 ಕಾರಣದಿಂದ ಕಳೆದ ವರ್ಷ ನಡೆಯಬೇಕಿದ್ದ ಒಲಿಂಪಿಕ್ ಗೇಮ್ ಅನ್ನು ಈ ವರ್ಷಕ್ಕೆ ಮುಂದೂಡಲಾಗಿತ್ತು. ಆತಂಕ, ನಿರ್ಬಂಧಗಳೊಂದಿಗೆ ಈ ಬಾರಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ 17 ದಿನಗಳ ಕ್ರೀಡಾ ಕೂಟ ಇಂದು ಪೂರ್ಣಗೊಳ್ಳುತ್ತಿದೆ.
ಕೊನೆಯ ದಿನವಾದ ಇಂದು ಪುರುಷರ ಮ್ಯಾರಥಾನ್ ಫೈನಲ್, ಮಹಿಳಾ ರಿದಮಿಕ್ ಜಿಮ್ನಾಸ್ಟಿಕ್ಸ್ ಮತ್ತು ಮಹಿಳಾ ಬಾಸ್ಕೆಟ್‌ಬಾಲ್ ಪದಕ ಸುತ್ತಿನ ಪಂದ್ಯ ನಡೆಯುತ್ತಿದೆ. ಹ್ಯಾಂಡ್‌ಬಾಲ್, ಬಾಕ್ಸಿಂಗ್, ಟ್ರ್ಯಾಕ್ ಸೈಕ್ಲಿಂಗ್, ವಾಟರ್ ಪೋಲೋ ಮತ್ತು ವಾಲಿಬಾಲ್ ಪಂದ್ಯಗಳು ಜರುಗಲಿವೆ.
ಮುಂದಿನ ಒಲಿಂಪಿಕ್ಸ್ ಆತಿಥ್ಯ ಫ್ರಾನ್ಸ್ : ಇಂದು ಮುಕ್ತಾಯ ಸಮಾರಂಭದಲ್ಲಿ ಒಲಿಂಪಿಕ್ಸ್ ಧ್ವಜವನ್ನು 2024ರಲ್ಲಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಫ್ರಾನ್ಸ್‌ಗೆ ಹಸ್ತಾಂತರಿಸಲಾಗುತ್ತದೆ. ಇದೇ ಜುಲೈ 24ರಿಂದ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಆ ಕ್ರೀಡಾಕೂಟಕ್ಕೂ ಟೋಕಿಯೋ ಆತಿಥ್ಯ ನೀಡಲಿದೆ. ಸೆಪ್ಟೆಂಬರ್ 5ಕ್ಕೆ ಪ್ಯಾರಾಲಿಂಪಿಕ್ಸ್ ಮುಕ್ತಾಯಗೊಳ್ಳಲಿದೆ.
ಭಾರತ ಈ ಬಾರಿಯ ಒಲಿಂಪಿಕ್ ನಲ್ಲಿ ಏಳು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅದರಲ್ಲಿ ನಿನ್ನೆ ನಡೆ ಪುರುಷರ ಜಾವೆಲಿನ್ ಥ್ರೋ ನಲ್ಲಿ ಸ್ವರ್ಣ ಗೆಲ್ಲುವ ಮೂಲಕ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ ನೀರಜ್ ಚೋಪ್ರಾ.