ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜಧಾನಿಯ ಪೊಲೀಸರಿಗೆ ಠಾಣೆಗಳಲ್ಲೇ ಬೆಳಗಿನ ಉಪಾಹಾರ, ಮಧ್ಯಾಹ್ನದ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನುಇಂದಿನಿಂದ ಮಾಡಲಾಗಿದೆ.
ಕೊರೊನಾ ಮಹಾಮಾರಿ ಮಹಾನಗರದಲ್ಲಿ ಶರವೇಗದಲ್ಲಿ ಹಬ್ಬುತ್ತಿದ್ದು, ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸ್ ಸಿಬ್ಬಂದಿ ನಗರದಲ್ಲಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ 24X7 ಕರ್ತವ್ಯ ನಿರ್ವಾಹಿಸುತ್ತಿರುತ್ತಾರೆ. ಹೀಗಾಗಿ ಅವರು ಮನೆಗೆ ಹೋಗಿ ಬಂದು ಕರ್ತವ್ಯ ನಿರ್ವಹಿಸಲು ತುಸು ಕಷ್ಟವಾಗಲಿದೆ ಎಂಬ ದೃಷ್ಟಿಯಿಂದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರು ಠಾಣೆಗಳಲ್ಲೇ ನಿತ್ಯ ಊಟದ ವ್ಯವಸ್ಥೆ ಮಾಡುವಂತೆ ಎಲ್ಲಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದಿನಿಂದ ಊಟದ ವ್ಯವಸ್ಥೆ ಮಾಡಲಾಗಿದೆ.
ನಿತ್ಯ ಊಟಕ್ಕಾಗಿ ಸಿಬ್ಬಂದಿಗೆ ನೀಡುತ್ತಿದ್ದ 200 ರೂ.ಗಳಲ್ಲೇ ಈ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಮನೆಯಲ್ಲಿ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಆಗಲಿಲ್ಲ ಎಂದು ವಿಳಂಬವಾಗಿ ಬರುವುದು ತಪ್ಪಿದಂತಾಗಿದೆ.
ಇನ್ನು ದಕ್ಷಿಣ ವಿಭಾಗದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಎಲ್ಲಾ 80 ಸಿಬ್ಬಂದಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ ರಾಗಿಮುದ್ದೆ, ಅನ್ನ ಸಾಂಬರ್, ಹಪ್ಪಳ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
ಎಲ್ಲಾ ಸಿಬ್ಬಂದಿಗೂ ಊಟದ ವ್ಯವಸ್ಥೆ ಮಾಡಲು ಒಬ್ಬರು ಅಡುಗೆ ಭಟ್ಟರನ್ನು ನೇಮಿಸಿಕೊಂಡಿದ್ದು ಠಾಣೆ ಆವರಣದಲ್ಲೇ ಅವರು ಅಡುಗೆ ಮಾಡಿ ಬಡಿಸುತ್ತಿದ್ದಾರೆ.
ಕೊರೊನಾ ಮಹಾಮಾರಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಮ್ಮ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಮತ್ತು ನಾಗರಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಅವರಿಗೆ ಠಾಣೆಯಲ್ಲೇ ಊಟದ ವ್ಯವಸ್ಥೆ ಮಾಡಲಾಗಿದೆ. ನಮ್ಮ ಸಿಬ್ಬಂದಿ ಮನೆಗೆ ಹೋಗಿ ಊಟ ಮಾಡಿಕೊಂಡು ತರಾತುರಿಯಲ್ಲಿ ಬರಬೇಕಿತ್ತು. ಈ ವ್ಯವಸ್ಥೆಯಿಂದ ಅವರಿಗೂ ಸ್ವಲ್ಪಮಟ್ಟಿಗೆ ನಿರಾಳವಾಗಿದೆ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ. ಶಿವಕುಮಾರ್ ವಿಜಯಪಥಕ್ಕೆ ತಿಳಿಸಿದರು.