ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ಪ್ರಕರಣವನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಸಂತ್ರಸ್ಥ ಯುವತಿ ಪ್ರಾರಂಭದ ಆಡಿಯೋದಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ ಎಂದು ಹೇಳಿದ್ದಳು. ಈಗ ತನಗೆ ಪ್ರಾಣಭಯ ಇದೆ ಎಂದು ಪತ್ರ ಬರೆದಿದ್ದಾಳೆ. ಆ ಯುವತಿಯ ಪ್ರಾಣಕ್ಕೇನಾದರೂ ಅಪಾಯ ಎದುರಾದರೆ ರಾಜ್ಯದ ಮುಖ್ಯಮಂತ್ರಿ ಬಿಎಸ್‌ವೈ, ಗೃಹಸಚಿವ ಬಸವರಾಜ ಬೊಮ್ಮಾಯಿ, ಮತ್ತು ಇಡೀ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದರು.
ಇದಕ್ಕೆ ಬಿಜೆಪಿ ತಿರುಗೇಟು ನೀಡಿರುವ ಬಿಜೆಪಿ ಸಿದ್ದರಾಮಯ್ಯನವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದೆ. “ಸೆಕ್ಷನ್ ಸ್ಪೆಷಲಿಸ್ಟ್ @siddaramaiah, ಸಂತ್ರಸ್ಥ ಯುವತಿಯ ಪೋಷಕರು ನೇರವಾಗಿ ನಿಮ್ಮ ಕೆಪಿಸಿಸಿ ಅಧ್ಯಕ್ಷ @DKShivakumar ಅವರ ಮೇಲೆ ಬೊಟ್ಟು ಮಾಡಿ, ಸಂತ್ರಸ್ಥೆಯನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಿರುವಾಗ ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಅವರು ಹೊಣೆ ಅಲ್ಲವೇ?” ಎಂದು ಬಿಜೆಪಿ ಪ್ರಶ್ನಿಸಿದೆ.
“ನಿಮಗೆ ಈಗ ಜ್ಞಾನೋದಯವಾಗಿದ್ದೇ!? ಸದನದಲ್ಲಿ ಬಜೆಟ್ ಮೇಲಿನ ಚರ್ಚೆಯ ಸಮಯವನ್ನು ಅಪ್ರಸ್ತುತವಾದ ವಿಚಾರಕ್ಕೆ ಬಳಸಿಕೊಂಡು ಸದನದ ಅಮೂಲ್ಯ ಸಮಯ ವ್ಯರ್ಥ ಮಾಡುವಾಗ ಇದೆಲ್ಲಾ ನೆನಪಿರಲಿಲ್ಲವೇ? ಡಿಕೆಶಿ ಹೆಸರು ಬರುತ್ತಲೇ ವರಸೆ ಬದಲಾಯಿಸಿಬಿಟ್ಟಿರಿ!” ಎಂದು ಬಿಜೆಪಿ ಟ್ವೀಟ್ ಮಾಡಿದೆ.
“ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ. ಒಂದು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುತ್ತದೆ. ಇನ್ನೊಂದು, @DKShivakumar ನಡೆಸಿದ ಷಡ್ಯಂತ್ರವನ್ನು ಸಾಬೀತುಪಡಿಸಬಹುದು. ಒಬ್ಬ ಪ್ರತಿಸ್ಪರ್ಧಿಯನ್ನು ಕೆಡವಿದ ಸಾಧನೆ ನಿಮ್ಮದಾಗಲಿದೆ. ಏನಂತೀರಿ?” ಎಂದು ಸಿದ್ದರಾಮಯ್ಯನವರನ್ನು ಬಿಜೆಪಿ ಪ್ರಶ್ನಿಸಿದೆ.
“ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ “ಮಹಾ ನಾಯಕ” ಆಗಲು ಹೊರಟ “ಜೈಲು ಹಕ್ಕಿ” ಇಂದು “ಖಳನಾಯಕ” ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ” ಎಂದು ಬಿಜೆಪಿ, ವಿಪಕ್ಷದ ನಾಯಕರನ್ನು ಪ್ರಶ್ನಿಸಿದೆ.