ಸಿಎಂ ವಿರುದ್ಧ ಈಶ್ವರಪ್ಪ ಪತ್ರ: ಬಿಎಸ್‌ವೈ ರಾಜೀನಾಮೆಗೆ ಡಿಕೆಶಿ ಆಗ್ರಹ
ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಇಲಾಖೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ರಾಜ್ಯಪಾಲ ವಿ.ಆರ್.ವಾಲಾ ಮತ್ತು ಪಕ್ಷದ ವರಿಷಷ್ಠರಿಗೆ ಪತ್ರ ಬರೆದಿದ್ದಾರೆ.
ಆ ಪತ್ರವನ್ನು ಉಲ್ಲೇಖಿಸಿ ಬುಧವಾರ ಸಂಜೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಸರ್ಕಾರದ ಹಿರಿಯ ಸಚಿವರೊಬ್ಬರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣವೇ ರಾಜೀನಾಮೆ ಸಲ್ಲಿಸಬೇಕು. ಒಂದುವೇಳೆ ಸಚಿವರ ಆರೋಪದಲ್ಲಿ ಸತ್ಯವಿಲ್ಲದಿದ್ದರೆ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಬಿಜೆಪಿ ಸರಕಾರ ಭ್ರಷ್ಟಾಚಾರದ ಗುಹೆಯಾಗಿ ಮಾರ್ಪಟ್ಟಿದೆ ಎಂದು ಅವರು ಹರಿಹಾಯ್ದಿದ್ದಾರೆ.
ಇನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ನನ್ನ ಇಲಾಖೆಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ನನ್ನ ಗಮನಕ್ಕೆ ತರದೇ ಮುಖ್ಯಮಂತ್ರಿಯವರು ಕೈಗೊಂಡಿದ್ದಾರೆ. ಇದರಿಂದ ಅತ್ಯಂತ ಹಿರಿಯ ಸದಸ್ಯರಾದ ನನಗೆ ತೀವ್ರ ಮುಜುಗರ ಮತ್ತು ನೋವು ಉಂಟಾಗಿದೆ ಎಂದು ಪತ್ರದಲ್ಲಿ ಈಶ್ವರಪ್ಪ ಹೇಳಿದ್ದಾರೆ.