ಸಿಎಂ ಬಿಎಸ್‌ವೈ ವಿರುದ್ಧ ರಾಜ್ಯಪಾಲರು, ಬಿಜೆಪಿ ಹೈಕಮಾಂಡ್‌ಗೆ ಸಚಿವ ಈಶ್ವರಪ್ಪ ದೂರು : ಇಲಾಖೆಯಲ್ಲಿ ಅನಗತ್ಯ ಹಸ್ತಕ್ಷೇಪ ಆರೋಪ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ರಾಸಲೀಲೆ ಸಿಡಿ ಕೇಸಿನ ಬಿಸಿಯ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮುಡಿಸುವ ವಿಚಾರ ಬಯಲಿಗೆ ಬಂದಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಇಲಾಖೆಯಲ್ಲಿ ಮೂಗುತೂರಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ವಿ.ಆರ್.ವಾಲಾ ಮತ್ತು ಪಕ್ಷದ ಹೈ ಕಮಾಂಡ್‌ಗೆ ದೂರು ಸಲ್ಲಿಸುವ ಮೂಲಕ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಒಳ ಬೇಗುದಿ ಸ್ಫೋಟಗೊಂಡಂತ್ತಾಗಿದೆ.
ತಮ್ಮ ಇಲಾಖೆಗೆ ಹಣಕಾಸು ಬಿಡುಗಡೆಯಲ್ಲಿನ ತಾರತಮ್ಯ ಮತ್ತು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ನಮ್ಮ ಇಲಾಖೆಗೆ ಸಂಬಂಧಿಸಿದ ತೀರ್ಮಾನ ತೆಗೆದುಕೊಳ್ಳುತ್ತಿರುವ ಬಗ್ಗೆ ಸಿಎಂ ಮೇಲೆ ಈಶ್ವರಪ್ಪ ಕೆಂಡ ಕಾರಿದ್ದಾರೆ.
ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಘೋಷಿಸುವ ಮುನ್ನ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದೂ ಅಸಮಾಧಾನ ಹೊರಹಾಕಿದ್ದಾರೆ.
ಇದೇ ವೇಳೆ ಪ್ರತಿಪಕ್ಷಗಳ ಶಾಸಕರ ಆಯ್ದ ಕ್ಷೇತ್ರಗಳಿಗೆ ಅನುದಾನ ಒದಗಿಸುವ ಮೂಲಕ ಸ್ವಪಕ್ಷೀಯರು ತಮ್ಮ ಮೇಲೆ ಹರಿಹಾಯುವಂತೆ ಯಡಿಯೂರಪ್ಪ ಮಾಡಿದ್ದಾರೆ ಎಂದೂ ಈಶ್ವರಪ್ಪ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಈಶ್ವರಪ್ಪ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಯಡಿಯೂರಪ್ಪ ಅವರ ಕಾರ್‍ಯಶೈಲಿ ಬದಲಿಸದಿದ್ದರೇ ಕಷ್ಟ ಎಂಬ ಮಾತುಗಳನ್ನು ಹೇಳಿದ್ದಾರೆ ಎಂದು ತಿಳಿದು ಬಂದಿದೆ.