ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ನೇರವಾಗಿ ಭಾಗಿಯಾಗಿರುವ ಶಾಸಕ ಸತೀಶ್ ರೆಡ್ಡಿ ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ನಗರ ಉಪಾಧ್ಯಕ್ಷ ಬಿ. ಟಿ. ನಾಗಣ್ಣ ಆಗ್ರಹಿಸಿದ್ದಾರೆ.
ಪಕ್ಷದ ಮಾಧ್ಯಮ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿವಸಗಳ ಹಿಂದೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಕೊರೊನಾ ರೋಗಿಗಳ ಬೆಡ್ ಬ್ಲಾಕಿಂಗ್ ಅಕ್ರಮ ದಂಧೆಯನ್ನು ಬಯಲಿಗೆಳೆದಿದ್ದೇನೆಂದು ಪರಾಕ್ರಮ ಮೆರೆದಿದ್ದರು.
ಆದರೆ ಈ ಅಕ್ರಮ ದಂಧೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ ಅವರು, ಇಂಥ ದಂಧೆಯಲ್ಲಿ ಪಾಲ್ಗೊಂಡಿರುವ ಕೊಲೆಪಾತಕರನ್ನು ರಕ್ಷಿಸುವ ಸಲುವಾಗಿ ಉತ್ತರನ ಪೌರುಷ ಒಲೆ ಮುಂದೆ ಎಂಬಂತೆ ತೇಜಸ್ವಿ ಸೂರ್ಯ ನಡೆದುಕೊಂಡು ಈಗ ಕಾಣೆಯಾಗಿರುವುದು ಏತಕ್ಕೆ ಎಂದು ಕಿಡಿಕಾರಿದರು.
ಇಂದು ಮಾಧ್ಯಮಗಳಲ್ಲಿ ಶಾಸಕ ಸತೀಶ್ ರೆಡ್ಡಿ ನೇರ ಪಾತ್ರವಿರುವುದು ಬಯಲಾಗಿದೆ. ಈ ಬಗ್ಗೆ ಸಂಸದರು ಜನತೆಗೆ ಏನೆಂದು ಉತ್ತರ ಹೇಳುತ್ತಾರೆ ? ಶಾಸಕ ಸತೀಶ್ ರೆಡ್ಡಿ ಹಾಗೂ ಇನ್ನಿತರರ ಕೊಲೆ ಪಾತಕಿಗಳನ್ನು ಪೊಲೀಸ್ ಇಲಾಖೆ ಈ ಕೂಡಲೇ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಬೇಕು ಎಂದು ನಾಗಣ್ಣ ಒತ್ತಾಯಿಸಿದರು .
ಬೆಂಗಳೂರಿನ ಎಲ್ಲಾ ವಲಯಗಳ ಸಹಾಯವಾಣಿ ಕೇಂದ್ರಗಳಲ್ಲಿ ಬಿಜೆಪಿಯ ಪ್ರಮುಖ ಮಂತ್ರಿಗಳು ಹಾಗೂ ಶಾಸಕರು ನೇರ ಕೈವಾಡವಿದ್ದು ಎಲ್ಲರೂ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡು ಇದುವರೆವಿಗೂ ಬೆಡ್ ಸಿಗದೆ ಆಗಿರುವ ಸಾವಿರಾರು ಅಮಾಯಕ ರೋಗಿಗಳ ಸಾವಿಗೆ ನೇರ ಹೊಣೆಗಾರರಾಗಿದ್ದಾರೆಂದು ಆರೋಪಿಸಿದರು.
ಇಂತಹ ದೊಡ್ಡ ದುಷ್ಕೃತ್ಯಗಳಲ್ಲಿ ಪ್ರಭಾವಿಗಳ ಪಾತ್ರ ಇದ್ದೇ ಇರುತ್ತದೆ ಎಂಬುದು ಮೊದಲಿನಿಂದಲೂ ಆಮ್ ಆದ್ಮಿ ಪಕ್ಷದ ಸ್ಪಷ್ಟ ಅಭಿಪ್ರಾಯವಾಗಿತ್ತು. ಪ್ರಭಾವಿಗಳನ್ನು ರಕ್ಷಿಸಲು ಹೋಗಿ ಸಂಸದರು ಸಣ್ಣ ಸಣ್ಣ ಅಧಿಕಾರಿಗಳನ್ನು ಹಾಗೂ ಗುತ್ತಿಗೆ ನೌಕರರನ್ನು ಬಂಧಿಸಿ ಪ್ರಕರಣವನ್ನು ದಿಕ್ಕು ತಪ್ಪಿಸುವ ಹುನ್ನಾರ ಕೈಗೊಂಡಿದ್ದರು. ಆದರೆ ಈಗ ಪ್ರಭಾವಿಗಳ ಬಣ್ಣ ಬಟಾಬಯಲಾಗಿದೆ ಎಂದರು.
ಈ ಸಂಬಂಧ ಶಾಸಕ ಸತೀಶ್ ರೆಡ್ಡಿ ವಿರುದ್ಧ ಈಗಾಗಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ದೂರನ್ನು ಸಹ ಸಲ್ಲಿಸಲಾಗಿದೆ. ಕೂಡಲೇ ಸರ್ಕಾರವು ಪ್ರಕರಣದ ತನಿಖೆಯ ಹಾದಿಯನ್ನು ತಪ್ಪಿಸದೆ ತನ್ನದೇ ಪಕ್ಷದ ಪ್ರಭಾವಿಗಳು ಶಾಸಕರು ಹಾಗೂ ಮಂತ್ರಿಗಳ ವಿರುದ್ಧ ತನಿಖೆ ಕೈಗೊಳ್ಳಲು ಹಾಲಿ ಉಚ್ಚನ್ಯಾಯಾಲಯದ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ನಾಗಣ್ಣ ಆಗ್ರಹಿಸಿದರು.
ಪಕ್ಷದ ಮಹಿಳಾ ಮುಖಂಡರಾದ ಉಷಾ ಮೋಹನ್ ಭಾಗವಹಿಸಿದ್ದರು.