ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಪೂರ್ಣಪ್ರಮಾಣದ ಲಾಕ್‌ಡೌನ್ ಇಲ್ಲ. ಬದಲಿಗೆ ಈಗ ಇರುವ ಜನತಾ ಕರ್ಫ್ಯೂ ಮುಂದುವರಿಯಲಿದೆ. ಮೇ 22ರವರೆಗೂ ವಿಸ್ತರಿಸುವ ಕುರಿತು ಮುಂದಿನ ಸಭೆಯಲ್ಲಿ ನಿರ್ಧಿಸಲಾಗುವುದು. ಇನ್ನು ಪತ್ರಕರ್ತರನ್ನು ಕೊರೊನಾ ಮುಂಚೂಣಿ ಕಾರ್ಯಕರ್ತರು (ಫ್ರಂಟ್‌ಲೈನ್ ವರ್ಕರ್ಸ್) ಎಂದು ಘೋಷಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿನ ಕೊರೊನಾ ಸೋಂಕಿನ ಪರಿಸ್ಥಿತಿ ಮತ್ತು ಆಕ್ಸಿಜನ್ ಸರಬರಾಜು ಕುರಿತಂತೆ ಇಂದು ಸಂಜೆ ವಿಧಾನ ಸೌಧದಲ್ಲಿ ಆಯೋಜಿಸಿದ್ದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗಳಲ್ಲಿ ಕೊವಿಡ್ ಸಂಬಂಧಿತ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೇ ಸರಿಪಡಿಸಬೇಕು. ಮೆಡಿಕಲ್ ಆಕ್ಸಿಜನ್ ಸಬರಾಜು ವ್ಯವಸ್ಥೆಯ ಜವಾಬ್ಧಾರಿಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಇನ್ನು ರೆಮ್ ಡಿಸಿವರ್ ಪೂರೈಕೆ ನಿರ್ವಹಣೆ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ ಸಿ.ಎನ್. ಆಶ್ವತ್ಥನಾರಾಯಣ ಅವರು ವಹಿಸಿಕೊಳ್ಳಲಿದ್ದಾರೆ. ಆಸ್ಪತ್ರೆಗಳಲ್ಲಿನ ಬೆಡ್ಗಳ ಹೊಣೆಗಾರಿಕೆಯನ್ನು ಸಚಿವ ಆರ್. ಅಶೋಕ್ ನೋಡಿಕೊಳ್ಳಲಿದ್ದಾರೆ. ಹಾಗೆಯೇ, ಅರಣ್ಯ ಸಚಿವ ಅರವಿಂದ್ ಲಿಂಬಾವಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಕೆಲ ಜವಾಬ್ದಾರಿ ಹೊರಿಸಲಾಗಿದೆ ಎಂದು ಹೇಳಿದರು.
ಆಕ್ಸಿಜನ್ ದುರಂತದ ಕುರಿತು ಸಿಎಂ ವಿಷಾದ
ಚಾಮರಾಜನಗರದ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ದುರಂತದ ಬಗ್ಗೆ 3 ದಿನದಲ್ಲಿ ವರದಿ ನೀಡಲು ಸೂಚಿಸಿದ್ದೇನೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಹಾಗಾಗಿ ಜಿಂದಾಲ್ ಕಂಪನಿ ಉತ್ಪಾದಿಸುವ ಮೆಡಿಕಲ್ ಆಕ್ಸಿಜನ್ನ್ನು ನಾವೇ ಬಳಸಿಕೊಳ್ಳುತ್ತೇವೆ. ಈ ಕುರಿತು ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.
ಬೆಡ್ ಬ್ಲಾಕಿಂಗ್ ಹಗರಣದ ಕುರಿತು ಮಾಹಿತಿ ಲಭ್ಯ
ಸಂಸದ ತೇಜಸ್ವಿ ಸೂರ್ಯ ಹಾಸಿಗೆ ಬ್ಲಾಕಿಂಗ್ ಮಾಡುವ ದಂಧೆ ಬಯಲಿಗೆಳೆದಿದ್ದಾರೆ. ಈ ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಬೆಡ್ ಬ್ಲಾಕಿಂಗ್ನಲ್ಲಿ ಯಾರೇ ಭಾಗಿಯಾಗಿದ್ರೂ, ಅವರು ಎಂಥ ಅಧಿಕಾರಿಯಾಗಿದ್ದರೂ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಅಧಿಕಾರಿಗಳ ಜತೆ ಸಭೆ ಮಾಡುತ್ತೇನೆ ಎಂದು ವಿವರಿಸಿದರು.
ಮೇ 22ರವರೆಗೂ ಜನತಾ ಕರ್ಫ್ಯೂ ವಿಸ್ತರಣೆ
ಮೇ 12ರವರೆಗೂ ಈಗ ಜಾರಿಯಲ್ಲಿರುವ ಕಠಿಣ ನಿಯಮಗಳೇ ಜಾರಿಯಲ್ಲಿರುತ್ತವೆ. ಅದಾದ ಬಳಿಕ ಮುಂದಿನದ್ದು ಚರ್ಚಿಸಿ ನಿರ್ಧರಿಸುತ್ತೇವೆ. ಮಾನವ ಸಂಪನ್ಮೂಲವಾಗಿ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸುತ್ತೇವೆ. ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿರಬೇಕು
ಹಾಗೆಯೇ, ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಣಗೊಳಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ಹೆಗಲಿಗೇ ಈ ಹೊಣೆ ನೀಡಲಾಗಿದೆ. ನಾಳೆಯಿಂದಲೇ ಜಿಲ್ಲಾ ಉಸ್ತುವರಿ ಸಚಿವರು ಅವರ ಜಿಲ್ಲೆಗಳಿಗೆ ಹೋಗಬೇಕು. ಅಲ್ಲಿಯೇ ಇದ್ದು ಪರಿಸ್ಥಿತಿ ನಿಭಾಯಿಸಬೇಕು. ಈ ಬಗ್ಗೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಇನ್ನು ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಿಎಂ ಮತ್ತು ಆರೋಗ್ಯ ಸಚಿವರು ವಿಫಲರಾಗಿದ್ದು ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವರು ಆಗ್ರಹಿಸುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಿಎಂ ವಿಪಕ್ಷದವರು ಇರುವುದೇ ರಾಜೀನಾಮೆ ಕೇಳುವುದಕ್ಕೆ ಎಂದು ವ್ಯಂಗ್ಯವಾಗಿ ನುಡಿದರು.