ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೋವಿಡ್ ವೈರಸ್ ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ನಿಮ್ಮ ಬೇಡಿಕೆ ಕಾಯ್ದಿರಿಸಿ ಸೇವೆ ಆರಂಭಿಸಿ ಎಂದು ಸಾರಿಗೆ ನೌಕರರಿಗೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.
ಈ ಹೈಕೋರ್ಟ್ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಕಳೆದ 14 ದಿನಗಳಿಂದ ಸಾರಿಗೆ ನೌಕರರು ಮಾಡುತ್ತಿರುವ ಮುಷ್ಕರ ಇಂದಿಗೆ ಕೊನೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕೊರೊನಾದಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಈ ನಡುವೆ ನಿಮ್ಮ ಬೇಡಿಕೆ ಕಾಯ್ದಿರಿಸಿ ತಕ್ಷಣ ಸೇವೆ ಆರಂಭಿಸಿ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಸೂಚನೆ ನೀಡಿದ್ದು, ಮುಷ್ಕರ ನಿರತ ಸಾರಿಗೆ ನೌಕರರ ಕೂಟಕ್ಕೂ ನೋಟಿಸ್ ನೀಡಿದೆ.
ಸರ್ಕಾರದ ಪರವಾಗಿ ಹಾಜರಾಗಿದ್ದ ಎಜಿ ಪ್ರಭುಲಿಂಗ ನಾವದಗಿ, ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿಗೊಳಿಸಲಾಗಿದೆ. ಸರ್ಕಾರ ಕಾರ್ಮಿಕರ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದೆ. ಸಾರಿಗೆ ನೌಕರರ ಮುಷ್ಕರ ಕಾನೂನುಬಾಹಿರವೆಂದು ಘೋಷಿಸಲಾಗಿದೆ. ಕೆಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, ಸರ್ಕಾರಿ ನೌಕರರಾಗಿಸುವ ಬೇಡಿಕೆ ಪರಿಗಣಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಾಲಯದ ಆದೇಶದ ಬಗ್ಗೆ ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ನಾವು ನ್ಯಾಯಾಲಯದ ಪೂರ್ಣ ಪ್ರಮಾಣದ ಆದೇಶವನ್ನು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ಸಾರಿಗೆ ನೌಕರರು ಮುಷ್ಕರ ಸ್ಥಗಿತಗೊಳಿಸಿ ಕರ್ತವ್ಯಕ್ಕೆ ಹಾಜರಾಗಿ ಎಂದು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿ ತಾತ್ಕಾಲಿಕವಾದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.