ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ. ಪ್ರಕರಣದ ಸಂತ್ರಸ್ತ ಯುವತಿಯು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ.
ಇ-ಮೇಲ್ ಮೂಲಕ ನಿನ್ನೆಯೇ ಪತ್ರವನ್ನು ರವಾನೆ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ನಮ್ಮ ಪಾಲಕರಿಂದ ಒತ್ತಡ ಹಾಕಿ ನನ್ನನ್ನು ಅಪಹರಣ ಮಾಡಿಸಿರುವುದಾಗಿ ಹೇಳಿಕೆ ನೀಡಿಸಿದ್ದಾರೆ. ಡಿವೈಎಸ್‌ಪಿ ಕಟ್ಟಿಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕಟ್ಟೀಮನಿ ರಮೇಶ್ ಜಾರಕಿಹೊಳಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯವು ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ನನಗೆ ಮತ್ತು ನನ್ನ ಪಾಲಕರಿಗೆ ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಂದ ನನಗೆ ಮತ್ತು ನನ್ನ ಪಾಲಕರಿಗೆ ಜೀವ ಬೆದರಿಕೆ ಇದೆ. ಈ ಪ್ರಕರಣದಲ್ಲಿ ನಾನು ಸಂತ್ರಸ್ತೆ. ಆರೋಪ ಮುಕ್ತರಾಗಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ರಮೇಶ್ ಜಾರಕಿಹೊಳಿ ಈಗಾಗಲೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಎಂದು ಪತ್ರದಲ್ಲಿ ಸಂತ್ರಸ್ತ ಯುವತಿ ಉಲ್ಲೇಖಿಸಿದ್ದಾರೆ.
ರಮೇಶ್ ಜಾರಕಿಹೊಳಿ ಜತೆ ಎಸ್‌ಐಟಿ ಪೊಲೀಸರು ಕೈಜೋಡಿಸಿದ್ದಾರೆ. ಆತಂಕದ ನಡುವೆಯೂ ನನ್ನ ಪೋಷಕರಿಗೆ ಎಸ್‌ಐಟಿ ವಿಚಾರಣೆ ಮಾಡಿದೆ. ಸರ್ಕಾರ ಕೂಡ ಜಾರಕಿಹೊಳಿ ಅವರನ್ನು ರಕ್ಷಣೆ ಮಾಡುತ್ತಿದೆ. ಕರ್ನಾಟಕ ಸರ್ಕಾರ ಏಜೆನ್ಸಿಯಾಗಿರುವ ಎಸ್‌ಐಟಿ ಮೇಲೆ ನನಗೆ ಭರವಸೆ ಇಲ್ಲ. ನನ್ನನ್ನು ಜಾರಕಿಹೊಳಿ ಕೊಲೆ ಮಾಡಬಹುದು. ರಕ್ಷಣೆ ನೀಡಿʼ ಎಂದು ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರಿದ್ದಾರೆ.