ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಕೋರ್ಟ್‌ಗೆ ಹಾಜರಾಗಿದ್ದಾರೆ ಎಂದು ಯುವತಿ ಪರ ವಕೀಲರಾದ ಜಗದೀಶ್ ಹೇಳಿದ್ದಾರೆ.
ಈಗ ಬಂದ ಮಾಹಿತಿ ಪ್ರಕಾರ ಅಂದರೆ ಮಧ್ಯಾಹ್ನ 3.25ರಲ್ಲಿ ಯುವತಿಯನ್ನು ಅಜ್ಞಾತ ಸ್ಥಳದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ನ್ಯಾಯಾಧೀಶರು ಮತ್ತು ಟೈಪಿಸ್ಟ್ ಇಬ್ಬರೆ ಯುವತಿ ಹೇಳಿಕೆ ನೀಡುವ ಸ್ಥಳದಲ್ಲಿದ್ದು, ಆಕೆಯ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಯುವತಿಗೆ ಭದ್ರತೆ ನೀಡುವ ದೃಷ್ಟಿಯಿಂದ ಮಾಧ್ಯಮದವರಿಗೂ ಎಲ್ಲಿ ಹಾಜರು ಪಡಿಸಲಾಗುತ್ತದೆ ಎಂಬ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಆಕೆಯನ್ನು ವಸಂತನಗರದ ಗುರುನಾನಕ್ ಭವನದಲ್ಲಿ ಇರುವ ವಿಶೇಷ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ವಕೀಲರು ಈಗ ಸ್ಪಷ್ಟಪಡಿಸಿದ್ದಾರೆ.
ಸಿಆರ್‌ಪಿಸಿ 164 ಸೆಕ್ಷನ್ ಅಡಿಯಲ್ಲಿ ಯುವತಿಯ ಹೇಳಿಕೆಯನ್ನು ನ್ಯಾಯಾಧೀಶರು ಪಡೆಯುತ್ತಿದ್ದಾರೆ.
ಆದರೆ ಮತ್ತೊಂದು ಮೂಲಗಳ ಪ್ರಕಾರ ಯುವತಿ ಕೋರ್ಟ್‌ಗೆ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಕೀಲ ಶಿವರಾಜ್ ಎಂಬುವರು ಟಿವಿ ಮಾಧ್ಯಮವೊಂದರಲ್ಲಿ ಮಾತನಾಡುವ ವೇಳೆ ಯುವತಿಯನ್ನು ಈವರೆಗೂ ಹಾಜರು ಪಡಿಸಿಲ್ಲ. ಹೀಗಾಗಿ ಆಕೆಯನ್ನು ಎಲ್ಲಿ ಹಾಜರು ಪಡಿಸುತ್ತಾರೋ ಎಂಬುವುದು ಇನ್ನು ತಿಳಿದು ಬಂದಿಲ್ಲ ಎಂದು ಹೇಳಿದ್ದರು.