ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಘೋರಿ, ಘಜ್ನಿ ರೀತಿಯಲ್ಲಿ ದೇಶವನ್ನು ಲೂಟಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಾಮ್ರಾಜ್ಯದ ವಿರುದ್ಧ ನಾಳೆ ರಾಜ್ಯದಾದ್ಯಂತ ಕರಾಳ ದಿನ ಆಚರಣೆ ಮಾಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.
ಮೋದಿಯವರ ನೇತೃತ್ವದ ಬಿಜೆಪಿ ಸರಕಾರದ ಏಳು ವರ್ಷಗಳ ಆಡಳಿತ ಏಳೇಳು ಜನ್ಮಕ್ಕೂ ಬೇಡವೆನ್ನುವಸಷ್ಟು ಜನತೆ ಬೇಸತ್ತು ಹೋಗಿದ್ದಾರೆ. ನಿರುದ್ಯೋಗ, ಡಿಮೋನಿಟೈಸೇಷನ್, ವೈಜ್ಞಾನಿಕ ತೆರಿಗೆ ನೀತಿ, ಕೊರೊನಾ ಸೋಂಕು ನಿಯಂತ್ರಣದಲ್ಲಿ ವೈಫಲ್ಯ ಮೊದಲಾದ ಸಾಲು ಸಾಲು ವೈಫಲ್ಯಗಳ ಅರಿವು ಜನತೆ ಇದ್ದರೂ ಮತ ಹಾಕಿದ ತಪ್ಪಿಗೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಪಾರ್ಟಿಯ ರಾಜ್ಯ ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸುಳ್ಳುಗಳನ್ನು ಹೇಳುತ್ತಾ ಜನತೆಯ ಕಣ್ಣಿಗೆ ಮಂಕು ಬೂದಿ ಎರಚಿ ತನ್ನ ವಿಫಲತೆಗಳನ್ನು ಸಾಧನೆ ಎಂಬಂತೆ ಬಿಂಬಿಸುತ್ತಿದೆ. ಅವೈಜ್ಞಾನಿಕ ಜಿ.ಎಸ್.ಟಿ ಮತ್ತು ನೋಟ್ ಬ್ಯಾನ್ ಮೂಲಕ ಶ್ರಮಿಕ ವರ್ಗಗಳ, ಬಡ ವರ್ಗಗಳ, ಸಣ್ಣ ಸಣ್ಣ ಉದ್ದಿಮೆಗಳನ್ನು ನಾಶಮಾಡಿದ ಪ್ರಧಾನಿ ಅದನ್ನು ದೊಡ್ಡ ಸಾಧನೆ ಎಂಬಂತೆ ಜನರನ್ನು ನಂಬಿಸಲು ಯತ್ನಿಸಿದರು. ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಅರ್ಥ ತಿಳಿಯದ ಬಿಜೆಪಿಗರು ಈಗಲೂ ಅಪಾಯಕಾರಿ ನೋಟ್ ಬ್ಯಾನ್ ಮತ್ತು ಜಿ ಎಸ್ ಟಿಯನ್ನು ಮಾಸ್ಟರ್ ಸ್ಟ್ರೋಕ್ ಎಂದು ನಂಬಿದ್ದಾರೆ ಎಂದರು.
ಭಾರತದ ಜಿಡಿಪಿಯ ಪ್ರಮಾಣವು ಹಿಂದೆಂದೂ ಕಂಡಿರದ ದಾಖಲೆಯ ಕುಸಿತ ಕಂಡು ದೇಶದ ಎಲ್ಲಾ ಉತ್ಪಾದಕ ವಲಯಗಳನ್ನು ನಾಶ ಮಾಡಿದೆ. ಇದರ ಪರಿಣಾಮ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರ ರೈತ ವಿರೋಧಿ ಸರಕಾರ. ದೇಶದ ಕೃಷಿ ವಲಯವನ್ನು ಸಂಪೂರ್ಣ ನಾಶ ಮಾಡಿ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ ಮೂರು ಕರಾಳ ಕೃಷಿ ನೀತಿಗಳನ್ನು ಜಾರಿಗೆ ತಂದು ರೈತರ ಭೂಮಿಯನ್ನು ಕಾರ್ಪೊರೇಟ್ ಗಳಿಗೆ ಮಾರುತ್ತಿರುವ ಮೋದಿ ಸರ್ಕಾರ ದೇಶಕ್ಕೆ ಮಾರಕ. ಬಂಡವಾಳ ಶಾಹಿ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಮೋದಿ ಸರಕಾರ ಅವರ ಕೋಟಿ ಕೋಟಿ ಸಾಲವನ್ನು ಮನ್ನಾ ಮಾಡುತ್ತಿದೆ. ಅಲ್ಲದೆ ದೇಶದ ಪ್ರಮುಖ ಸರಕಾರಿ ಸಂಸ್ಥೆಗಳನ್ನು ಖಾಸಗೀಕರ ಮಾಡಿ ಬಂಡವಾಳಶಾಹಿಗಳ ಋಣವನ್ನು ತೀರಿಸುತ್ತಿದೆ. ಇದು ಈ ದೇಶವನ್ನು ಘಜ್ನಿ ಮತ್ತು ಘೋರಿಗಳ ಹಾಗೆ ಕೊಳ್ಳೆ ಹೊಡೆಯುವ ತಂತ್ರವಾಗಿದೆ ಎಂದು ಟೀಕಿಸಿದರು.
ಬಿಜೆಪಿ ಸರಕಾರದ ಏಳು ವರ್ಷಗಳ ದೊಡ್ಡ ಸಾಧನೆ ಎಂದರೆ ಸಮಾಜದ ವಿವಿಧ ಸ್ತರಗಳಲ್ಲಿ ದ್ವೇಷ ಹರಡಿದ್ದು. ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಸರಕಾರವನ್ನು ಪ್ರಶ್ನೆ ಮಾಡಿದ ಪ್ರಜ್ಞಾವಂತ ನಾಗರಿಕರನ್ನು ಬಂಧಿಸಿದ್ದು. ಸಂವಿಧಾನ ವಿರೋಧಿ ಆಡಳಿತವನ್ನು ದೇಶಕ್ಕೆ ನೀಡಿ ದೇಶದ ಮೌಲ್ಯಗಳನ್ನು ನಾಶ ಮಾಡುತ್ತಿದೆ ಎಂದು ಮೋಹನ್ ದಾಸರಿ ಟೀಕಿಸಿದರು.
ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಯುವಕರನ್ನು ನಂಬಿಸಿ ಅವರ ಭವಿಷ್ಯದ ಜತೆ ಚೆಲ್ಲಾಟ ಅಡುತಿದ್ದಾರೆ. ಕೌಶಲ್ಯ ಅಭಿವೃದ್ದಿ, ಮೇಕ್ ಇಂಡಿಯಾ ಮೊದಲಾದ ತಳಹಿಡಿದ ಯೋಜನೆಗಳ ಮೂಲಕ ಯುವಕರ ಮೂಗಿಗೆ ತುಪ್ಪ ಸವರಿ ಮೋಸ ಮಾಡಿದೆ. ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಾಗದ ಬಿಜೆಪಿ ಅದೇ ಯುವಕರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ.
ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮೋದಿ ಸರಕಾರದ ಏಳು ವರ್ಷಗಳ ವಿಫಲ ಆಡಳಿತವನ್ನು ನಾಳೆ ಕರಾಳ ದಿನವಾಗಿ ರಾಜ್ಯದಾದ್ಯಂತ ಆಚರಿಸಲಾಗುವುದು. ಕಳೆದ ಒಂದು ತಿಂಗಳಿಂದ ಮನೆ ಮನೆಗಳಿಗೆ ದಿನಸಿ ಹಂಚುವ ಮೂಲಕ, ವಿವಿಧ ನೆರವು ನೀಡುವ ಕಾರ್ಯಕ್ರಮವನ್ನು ಪಕ್ಷ ನಡೆಸುತ್ತಿದೆ. ನಾಳೆ ಕಪ್ಪು ಪಟ್ಟಿ ಧರಿಸಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು, ಮೂಲಕ ಮೋದಿ ಸರಕಾರದ ವೈಫಲ್ಯಗಳ ಅರಿವು ಮೂಡಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ #SaakuModiSahavasa #ಸಾಕುಮೋದಿಸಹವಾಸ ಎಂಬ ಹ್ಯಾಶ್ ಟ್ಯಾಗ್ ಮೂಲಕ ಈ ಅಭಿಯಾನ ನಡೆಸಲಾಗುವುದು ಎಂದು ಮೋಹನ್ ದಾಸರಿ ತಿಳಿಸಿದರು.