ಬೆಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ಇಂದು ಸಂಜೆ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಮೇಣದ ಬತ್ತಿ ಪ್ರತಿಭಟನೆ ಹಮ್ಮಿಕೊಂಡಿದೆ.
ರಾಜ್ಯದಲ್ಲಿ ಕಳ್ಳತನ, ಕೊಲೆ, ದರೋಡೆ, ಅತ್ಯಾಚಾರ ಪ್ರಕರಣಗಳು ಸಾಮಾನ್ಯ ಎಂಬಂತಾಗಿವೆ. ಅವುಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದ್ದರಿಂದ ಅಪರಾಧಿಗಳಿಂದ ರಾಜ್ಯವನ್ನು ರಕ್ಷಿಸಿ ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಶುಕ್ರವಾರ (ಆ.27) ಸಂಜೆ 5:30ಕ್ಕೆ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸುತ್ತಿದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ತಿಳಿಸಿದ್ದಾರೆ.
ಇನ್ನು ಮೈಸೂರಿನಲ್ಲಿ ಕಳೆದ ಮಂಗಳವಾರ ಸಂಜೆ ನಡೆದಿರುವ ಸಾಮೂಹಿತ ಅತ್ಯಾಚಾರ. ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ನಡೆದ ಅತ್ಯಾಚಾರ ಯತ್ನ ಪ್ರಕರಣಗಳಲ್ಲದೆ ಕಳೆದ ಒಂದು ವಾರದೊಳಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜರುಗಿರುವ ಕೊಲೆ ದರೋಡೆ ಪ್ರಕರಣಗಳು ರಾಜ್ಯದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.
ಈ ರೀತಿ ಕೃತ್ಯ ಎಸಗುತ್ತಿರುವ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಈ ರೀತಿ ಹೆಚ್ಚಾಗುತ್ತಿದ್ದರೂ ಗೃಹಮಂತ್ರಿ ಬಾಲಿಶ ಹೇಳಿಕೆ ನೀಡುವ ಮೂಲಕ ಅವರ ಸಣ್ಣತವನ್ನು ತೋರಿಸಿಕೊಳ್ಳುತ್ತಿದ್ದಾರೆ. ಗಂಭೀರವಾದ ಪ್ರಕರಣ ನಡೆದರೂ ಸರ್ಕಾರ ಕಾಣದಂತೆ ವರ್ತಿಸುತ್ತಿದೆ. ಇನ್ನಾದರೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.