ಬೆಂಗಳೂರು: ಗೊದ್ರೇಜ್ ಜೊತೆ ಕೈಜೋಡಿಸಿರುವ ಶಾಸಕ ಅರವಿಂದ್ ಲಿಂಬಾವಳಿ ಅವರ ವಿರುದ್ಧ ತನಿಖೆ ನಡೆಯಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಮಾತನಾಡಿ, ಮಹಾದೇವಪುರ ವಿಧಾನಸಭಾ ಕ್ಷೇತ್ರದ ಗೊದ್ರೇಜ್ ಪ್ರಾಪರ್ಟೀಸ್ ಒತ್ತುವರಿ ಪ್ರಕರಣದಲ್ಲಿ ಅರವಿಂದ್ ಲಿಂಬಾವಳಿಯವರ ನೇರ ಕೈವಾಡ ಇದ್ದು ಚುನಾವಣೆಗಳಲ್ಲಿ ಗೆಲ್ಲಲು ಈ ಪ್ರಭಾವಿ ಕಾರ್ಪೊರೇಟ್ ಕಂಪನಿಗಳ ಬೆಂಗಾವಲಿದೆ. ಇವುಗಳ ಋಣ ತೀರಿಸಲು ಈಗ ಇಂತಹ ಅವೈಜ್ಞಾನಿಕ ಯೋಜನೆಗಳಿಗೆ ಅನುಮತಿ ನೀಡಿದ್ದಾರೆ ಎಂದರು.
ಇನ್ನು ಗೊದ್ರೇಜ್ ಪ್ರಾಪರ್ಟೀಸ್ ಲಿ. ಹಾಗೂ ವಂಡರ್ ಪ್ರಾಜೆಕ್ಟ್ ಡೆವೆಲಪ್ಮೆಂಟ್ ಪ್ರೈ.ಲಿ ಬೆಂಗಳೂರಿನಲ್ಲಿ ನಿರ್ಮಿಸಿರುವ ಬಹುಮಹಡಿ ಐಷಾರಾಮಿ ಕಟ್ಟಡವನ್ನು ಕೆಡವಿ 31 ಕೋಟಿ ರೂಪಾಯಿ ದಂಡ ಕಟ್ಟಲು ಆದೇಶಿಸಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶ ಸ್ವಾಗತಾರ್ಹ. ಆದರೆ ಇಷ್ಟೊಂದು ಬೃಹತ್ ಅಕ್ರಮ ಸ್ಥಳೀಯ ಶಾಸಕರ ಅರಿವಿಗೆ ಬಾರದೆ ಯಾವುದೇ ಕಾರಣಕ್ಕೂ ನಡೆಯಲು ಸಾಧ್ಯವೇ ಇಲ್ಲ. ಹೀಗಾಗಿ ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಇನ್ನು ಯಾವುದೇ ಶಾಸಕನಾದರೂ ಸಂವಿಧಾನದ ಪ್ರಕಾರ ತನ್ನ ಮತಕ್ಷೇತ್ರದಲ್ಲಿನ ಸರ್ಕಾರಿ ಜಾಗ, ಕೆರೆ, ಅರಣ್ಯ ಪ್ರದೇಶಗಳನ್ನು ಕಾಪಾಡಬೇಕಾಗಿರುವುದು ಆದ್ಯ ಕರ್ತವ್ಯವಾಗಿರುತ್ತದೆ. ಅದನ್ನು ಮೀರಿ ನಡೆದುಕೊಂಡಂತೆ ಕಾಣುತ್ತಿರುವ ನಿಟ್ಟಿನಲ್ಲಿ ಅರವಿಂದ್ ಲಿಂಬಾವಳಿ, ಅಧಿಕಾರಿಗಳು ಸೇರಿದಂತೆ ಅನೇಕ ನಾಯಕರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಯೋಜನೆಗೆ ಅಸ್ತು ನೀಡಿರುವ ಬಿಬಿಎಂಪಿಗೂ ದಂಡ ವಿಧಿಸಲಾಗಿದೆ. ಆದರೆ ಇದರ ಹಿಂದಿರುವ ಅಧಿಕಾರಿಗಳು ಮತ್ತು ಪ್ರಭಾವಿ ರಾಜಕೀಯ ನಾಯಕರ ಬಗ್ಗೆ ತನಿಖೆ ನಡೆಸಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದರು.
ಮಹಾದೇವಪುರದಲ್ಲಿ ಈ ಯೋಜನೆ ನಡೆಸುವಲ್ಲಿ ಕಾರಣವಾಗಿರುವ ಆರವಿಂದ ಲಿಂಬಾವಳಿಯವರ ಕೈವಾಡವನ್ನು ಆದ್ಮಿ ಪಾರ್ಟಿ ಕೆಲವು ದಿನಗಳಲ್ಲಿ ಬಯಲಿಗೆ ತರಲಿದೆ. ಸರಕಾರ ತಕ್ಷಣ ಮಹದೇವಪುರ ಮತಕ್ಷೇತ್ರದಲ್ಲಿ ಸರ್ಕಾರಿ ಜಾಗಗಳ ಒತ್ತುವರಿ ಗಳ ಬಗ್ಗೆ ಆಡಿಟ್ ನಡೆಸುವುದು ಅತ್ಯಗತ್ಯ .
ಈ ಕುರಿತು ಶ್ವೇತಪತ್ರ ಹೊರಡಿಸಬೇಕು ಮತ್ತು ಲಿಂಬಾವಳಿಯವರ ಪಾತ್ರವನ್ನು ತನಿಖೆ ನಡೆಸಬೇಕು. ಈ ಯೋಜನೆಗೆ ಸಹಕರಿಸಿ ಭ್ರಷ್ಟಾಚಾರ ಎಸಗಿರುವ ಬಿಬಿಎಂಪಿ ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ತನಿಖೆ ನಡೆಸಬೇಕು ಎಂದು ದರ್ಶನ್ ಜೈನ್ ಆಗ್ರಹಿಸಿದರು.
ಒಲಂಪಿಕ್ಸ್ : ಬಿದ್ದರು ಧೃತಿಗೆಡದ ಸಿಫಾನ್ ಹಸನ್ ಎದ್ದು ಗುರಿ ಮುಟ್ಟಿದ ಕ್ಷಣ