ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಎಲ್ಲಾ ನಾಗರಿಕ ಸೇವೆಗಳು ಆನ್ ಲೈನ್ ಮೂಲಕ ಜನರಿಗೆ ಲಭ್ಯವಾಗಬೇಕು. ತಾಂತ್ರಿಕ ಮಟ್ಟದಲ್ಲಿ ಜನರಿಗೆ ಸೇವೆಗಳನ್ನು ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ “ಅಮೃತ ಗ್ರಾಮ ಪಂಚಾಯಿತಿ ಯೋಜನೆ”ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್, ತಹಸೀಲ್ದಾರ್ ಕಚೇರಿಗಳಿಗೆ ಜನರು ಹೋಗಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಪ್ರಯಾಸಪಡುವುದು ತಪ್ಪುತ್ತದೆ ಈ ಯೋಜನೆಯಿಂದ ತಪ್ಪುತ್ತದೆ ಎಂದರು.
ಜನರ ಪಿಂಚಣಿ ಯೋಜನೆ, ರೇಷನ್, ಸಂಧ್ಯಾ ಸುರಕ್ಷ, ಅಂಗವಿಕಲರ ಮಾಸಾಶನ ಹೀಗೆ ಎಲ್ಲ ಯೋಜನೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಗಬೇಕು. ಅದು ಗ್ರಾಮ ಸೇವೆಯಾಗಿ ಬದಲಾಗಬೇಕು. ಗ್ರಾಮ ಸೇವಕರಿಗೆ ತರಬೇತಿಯನ್ನು ನೀಡಿ ಎಲ್ಲ ಸೇವೆಗಳು ಮನೆಮನೆಗೆ ತಲುಪುವ ಕೆಲಸ ಆಗಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿ ಮುಖಾಂತರ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ಸಿಗುವಂತೆ ಮಾಡುವ ‘ಗ್ರಾಮ ಸೇವಾ ಯೋಜನೆ’ಗೆ 2022ರ ಜನವರಿ 26 ರಂದು ಚಾಲನೆ ನೀಡಲಾಗುವುದು. ಆರಂಭದಲ್ಲಿ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದ್ದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಲಾಗುವುದು ಎಂದು ಸಿಎಂ ಪ್ರಕಟಿಸಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅಮೃತ ಗ್ರಾಮ ಪಂಚಾಯತಿ ಯೋಜನೆಗೆ ಚಾಲನೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕೆ ಮತ್ತು ಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್.ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕ ರಿಜ್ವಾನ್ ಅರ್ಷದ್, ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.