ಬೆಂಗಳೂರು: ಮೂರಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಬಿಪಿಎಲ್ ಕುಟುಂಬಗಳಿಗೆ ನೀಡಿದ್ದ ಭಾಗ್ಯಲಕ್ಷ್ಮಿ ಯೋಜನೆ ಸೌಲಭ್ಯಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮೂರು ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದು, ಸದ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಪಿಎಲ್ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 1 ಲಕ್ಷ ರು ಹಣ ನೀಡಲಾಗುತ್ತದೆ. 2005-06ನೇ ಸಾಲಿನಲ್ಲಿ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು.
ಆದರೆ, ಪ್ರಸ್ತುತ ಮೂರು ಮಕ್ಕಳನ್ನು ಹೊಂದಿರುವ ಬಿಪಿಎಲ್ ಕುಟುಂಬಗಳಿಂದ 2006 ಮತ್ತು 2014 ರ ನಡುವೆ ನೀಡಲಾದ ಭಾಗ್ಯಲಕ್ಷ್ಮಿ ಬಾಂಡ್ಗಳನ್ನು ಹಿಂಪಡೆಯಲು ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2005-06ರಲ್ಲಿ ಹೊರಡಿಸಲಾದ ಭಾಗ್ಯಲಕ್ಷ್ಮಿ ಬಾಂಡ್ಗಳು 2023-24ರಲ್ಲಿ ಮೆಚ್ಯುರಿಟಿ ಹೊಂದಲಿವೆ, ಆದರೆ ಅನೇಕ ಫಲಾನುಭವಿ ಬಿಪಿಎಲ್ ಕುಟುಂಬಗಳು ಈಗ ಮೂರು ಮಕ್ಕಳನ್ನು ಹೊಂದಿವೆ.
ಬಾಂಡ್ಗಳನ್ನು ವಾಪಸ್ ತೆಗೆದುಕೊಳ್ಳಲು ತೆರಳುವ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳಿಂದ ಪ್ರತಿರೋಧವನ್ನು ಎದುರಿಸುತ್ತಿದೆ, ವಿಶೇಷವಾಗಿ ಕೊಪ್ಪಳ ಜಿಲ್ಲೆಯ ಕುಕನೂರ್ ತಾಲ್ಲೂಕಿನಲ್ಲಿ ತೀವ್ರ ವಿರೋಧ ಎದುರಾಗಿದೆ. ಇಂತಹ 50,000 ಕ್ಕೂ ಹೆಚ್ಚು ಕುಟುಂಬಗಳು ರಾಜ್ಯಾದ್ಯಂತ ಇವೆ, ಆದರೆ ಕೇವಲ ಕೊಪ್ಪಳ ಜಿಲ್ಲೆಯನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂರು ಅಥವಾ ಹೆಚ್ಚಿನ ಮಕ್ಕಳೊಂದಿಗೆ ಬಿಪಿಎಲ್ ಕುಟುಂಬಗಳಿಗೆ ನೀಡಲಾದ ಬಾಂಡ್ಗಳನ್ನು ಹಿಂಪಡೆಯುವ ಕ್ರಮವನ್ನು ಸರ್ಕಾರ ಪ್ರಾರಂಭಿಸಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾಗ್ಯಲಕ್ಷ್ಮಿ ಬಾಂಡ್ಗಳನ್ನು ನೀಡಿದಾಗ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬಾರದು ಎಂದು ಬಿಪಿಎಲ್ ಕುಟುಂಬಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಇಲಾಖೆಯ ಉಪನಿರ್ದೇಶಕ ಅಕ್ಕಮಹಾದೇವಿ ತಿಳಿಸಿದರು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬವು ಇಬ್ಬರು ಮಕ್ಕಳನ್ನು ಹೊಂದಿದರೆ ಮಾತ್ರ ಯೋಜನೆಯ ಪ್ರಯೋಜನವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಏತನ್ಮಧ್ಯೆ ಸರ್ಕಾರ ತನ್ನ ಈ ಆದೇಶವನ್ನು ಹಿಂಪಡೆಯಬೇಕು ಎಂದು ಬಿಪಿಎಲ್ ಕುಟುಂಬಗಳು ಒತ್ತಾಯಿಸಿವೆ.