ಬೆಂಗಳೂರು: ಎಲ್ಲರಿಗೂ ಅವರಿಗೆ ಬೇಕಾದ ಖಾತೆ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಖಾತೆ ಹಂಚಿಕೆ ಬಗ್ಗೆ ಕ್ಯಾತೆ ತೆಗೆದ ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ತಿರುಗೇಟು ನೀಡಿದ್ದಾರೆ.
ಸಚಿವ ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡ ಹಿನ್ನೆಲೆಯಲ್ಲಿ ತಮಗೆ ನೀಡಿರುವ ಖಾತೆ ಬಗ್ಗೆ ಕ್ಯಾತೆ ತೆಗೆದವರಿಗೆ ಈ ಮೂಲಕ ಎಚ್ಚರಿಕೆ ನೀಡಿದ್ದು, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಚಿವ ಸ್ಥಾನ ನೀಡಲು ಮತ್ತು ಅವರು ಬಯಸಿದ ಖಾತೆಗಳನ್ನು ನೀಡಲು ಸಾಧ್ಯವಿಲ್ಲ. ಖಾತೆ ಬಗ್ಗೆ ಗೊಂದಲವಿದ್ದರೆ ಈ ಬಗ್ಗೆ ಸಚಿವರೊಂದಿಗೆ ಮಾತನಾಡುತ್ತೇನೆ ಎಂದರು.
ಈ ಹಿಂದೆ ಖಾತೆ ಹಂಚಿಕೆ ವಿಚಾರವಾಗಿ ಸಚಿವ ಆನಂದ್ ಸಿಂಗ್ ಅವರ ಹೇಳಿಕೆ ಕುರಿತು ಮಾತನಾಡಿದ ಸಿಎಂ, ‘ಪ್ರತಿಯೊಬ್ಬರೂ ತಮಗೆ ಬೇಕಾದ ಖಾತೆಗಳನ್ನು ಪಡೆಯಲು ಸಾಧ್ಯವಿಲ್ಲ. ಸಚಿವ ಆನಂದ್ ಸಿಂಗ್ ನನಗೆ ಹತ್ತಿರವಾಗಿದ್ದಾರೆ. ಹಾಗಾಗಿ ಎಲ್ಲವೂ ಚೆನ್ನಾಗಿರುತ್ತದೆ. ನಾನು ಅವರನ್ನು ಕರೆದು ಮಾತನಾಡಿದೆ. ನಾನು ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.
ನೂತನ ಸಚಿವ ಆನಂದ್ ಸಿಂಗ್ ಅವರಿಗೆ ಅರಣ್ಯ, ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ. ಈ ಕುರಿತು ಮಾತನಾಡಿದ್ದ ಆನಂದ್ ಸಿಂಗ್ ಅವರು, “ನಾನು ಈ ಖಾತೆಯನ್ನು ಕೇಳಿಲ್ಲ. ಪಕ್ಷದ ವೇದಿಕೆಯಲ್ಲಿ ನಾನು ಮಾಡಿದ ಯಾವುದೇ ವಿನಂತಿಯನ್ನು ಪರಿಗಣಿಸಲಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಭೇಟಿ ಮಾಡಲು ನಾನು ಯೋಜಿಸುತ್ತಿದ್ದೇನೆ . ನನ್ನ ವಿನಂತಿಯನ್ನು ಮರುಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದರು.
ಇವರಲ್ಲೇ ಇನ್ನು ಕೆಲ ಸಚಿವರು ತಮಗೆ ನೀಡಿರುವ ಖಾತೆಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ಖಡಕ್ ಸಂದೇಶವನ್ನು ಸಿಎಂ ರವಾನಿಸಿದ್ದು, ಕೊಟ್ಟಿರುವ ಖಾತೆಗಳನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ಎಂದು ಪರೋಕ್ಷವಾಗಿ ತಾಕೀತು ಮಾಡಿದ್ದಾರೆ.