ಹಾವೇರಿ: ಆಗಸ್ಟ್ 28 ಹಾಗೂ 29 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)-2021 ನಡೆಯಲಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಜ್ವರ ತಪಾಸಣೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪರೀಕ್ಷಾ ಮೇಲ್ವಿಚಾರಕರಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿಇಟಿ ಪರೀಕ್ಷೆ ಕುರಿತಂತೆ ಪೂರ್ವ ಸಿದ್ಧತೆ ಸಭೆ ನಡೆಸಿದ ಅವರು ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲು ಇಚ್ಛಿಸಿದಲ್ಲಿ ಕಡ್ಡಾಯವಾಗಿ ಆಯಾ ತಾಲೂಕು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ವ್ಯವಸ್ಥೆಮಾಡಬೇಕು. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ವೇಳಾಪಟ್ಟಿ: ಸಮಾನ್ಯ ಪ್ರವೇಶ ಪರೀಕ್ಷೆ ಎರಡು ದಿನ ನಡೆಯಲಿದ್ದು, ಆಗಸ್ಟ್ 28ರ ಶನಿವಾರ ಬೆಳಗ್ಗೆ 10-30 ರಿಂದ 11-30ರವರೆಗೆ ಜೀವಶಾಸ್ತ್ರ, ಮಧ್ಯಹ್ನ 2-30 ರಿಂದ 3-50ರವರೆಗೆ ಗಣಿತ ಹಾಗೂ ಆಗಸ್ಟ್ 29 ರಂದು ಭಾನುವಾರ ಬೆಳಗ್ಗೆ 10-30 ರಿಂದ 11-30ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2-30 ರಿಂದ 3-50ರವರೆಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ತಲಾ 60 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
3,840 ವಿದ್ಯಾರ್ಥಿಗಳು ನೊಂದಣಿ:
ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆಗೆ 3840 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಹಾವೇರಿಯಲ್ಲಿ ಆರು, ಹಿರೇಕೆರೂರಿನಲ್ಲಿ ಎರಡು ಹಾಗೂ ರಾಣೇಬೆನ್ನೂರಿನ ನಾಲ್ಕು ಸೆಂಟರ್‍ಗಳಲ್ಲಿ ಪರೀಕ್ಷೆ ನಡೆಯಲಿದೆ. ತಲಾ 24 ವಿದ್ಯಾರ್ಥಿಗಳಿಗೆ ಓರ್ವರಂತೆ 160 ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳು: ಹಾವೇರಿ ನಗರದ ಜಿ.ಎಚ್. ಪದವಿ ಪೂರ್ವ ಕಾಲೇಜ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆ, ಎಸ್.ಎಂ.ಎಸ್.ಪದವಿ ಪೂರ್ವ ಕಾಲೇಜ್, ಎಸ್.ಜೆ.ಎಂ.ಪದವಿ ಪೂರ್ವ ಕಾಲೇಜ್, ಹಿರೇಕೆರೂರು ಪಟ್ಟಣದ ಸಿ.ಇ.ಎಸ್ ಕೆ.ಎಚ್.ಪಾಟೀಲ ಪದವಿ ಪೂರ್ವ ಕಾಲೇಜ್ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜ್, ರಾಣೇಬೆನ್ನೂರು ನಗರದ ರಾಜರಾಜೇಶ್ವರಿ ಪದವಿ ಪೂರ್ವ ಕಾಲೇಜ್, ಸರ್ಕಾರಿ ಪದವಿ ಪೂರ್ವ ಕಾಲೇಜು, ರೋಟರಿ ಪದವಿ ಪೂರ್ವ ಕಾಲೇಜು ಹಾಗೂ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜ್‍ಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಈ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ.
ತ್ರಿ ಸದಸ್ಯ ಸಮಿತಿ: ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿ ಠೇವಣಿ ಮಾಡಲು ಕ್ರಮವಹಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ವೀಕ್ಷಕರ ನೇಮಕಮಾಡಿ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಕ್ರಮವಹಿಸಬೇಕು. ಪೊಲೀಸ್ ಬಂದೋಬಸ್ತ್ , ವೈದ್ಯಾಧಿಕಾರಿಗಳ ನೇಮಕ ಸೇರಿದಂತೆ ಎಲ್ಲ ಪೂರ್ವ ಸಿದ್ಧತೆಗಳನ್ನು ನಡೆಸಬೇಕು. ಪರೀಕ್ಷೆಯ ವಿವಿಧ ಜವಾಬ್ದಾರಿಗಳನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮಾರ್ಗಸೂಚಿ: ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಥರ್ಮಲ್ ಸ್ಕ್ಯಾನ್ ಬಳಸಿ ಜ್ವರ ತಪಾಸಣೆ ನಡೆಸಬೇಕು. 98ಕ್ಕಿಂತ ಹೆಚ್ಚು ತಾಪಮಾನವಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಪರೀಕ್ಷೆ ನಡೆಯುವ ಎಲ್ಲ ಕೊಠಡಿಗಳನ್ನು ಮುಂಚಿತವಾಗಿ ಸ್ಯಾನಿಟೈಸರ್ ಮಾಡಿಬೇಕು. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಒಂದಾದರೂ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು.
ಪರೀಕ್ಷೆ ಬರೆಯಲು ಬೇಕಾದ ಕೊಠಡಿಗಳಿಗಿಂತ ಹೆಚ್ಚುವರಿಯಾಗಿ ಒಂದು ವಿಶೇಷ ಕೊಠಡಿಯನ್ನು ಗುರುತಿಸಿ ಕಾಯ್ದಿರಿಸಬೇಕು. ವಿದ್ಯಾರ್ಥಿಗಳು ಊಟ, ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು. ಪರೀಕ್ಷಾ ಕೇಂದ್ರದಲ್ಲಿ ಬಿಸಿನೀರು ಪೂರೈಸಲು ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಕೈಗೊಳ್ಳಬೇಕು. ಪರೀಕ್ಷಾ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಜ್ವರ ತಪಾಸಣೆಗೆ ಒಳಗಾಗುವಂತೆ ಕಾಲೇಜಿನ ಮುಖ್ಯಸ್ಥರು ಎಂ.ಎಸ್.ಎಂ. ಅಥವಾ ದೂರವಾಣಿ ಮೂಲಕ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ನಿಷೇಧ: ಪರೀಕ್ಷಾ ಕೇಂದ್ರದೊಳಗೆ ಅತ್ಯಾಧುನಿಕ ಇಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಬ್ಯೂಟೂತ್, ಪ್ಲೇಜರ್, ವೃಲೆಸ್ ಸೆಟ್, ಲಾಗ್ ಟೇಬಲ್, ಕ್ಯಾಲಕ್ಯಲೇಟರ್ ಹಾಗೂ ರಿಸ್ಟ್‍ವಾಚಗಳನ್ನು ವಿದ್ಯಾರ್ಥಿಗಳು ಹಾಗೂ ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯೊಳಗೆ ತರದಂತೆ ನಿಷೇಧಿಸಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗಡಿಯಾದ ವ್ಯವಸ್ಥೆ ಮಾಡಬೇಕು. ಕೊಠಡಿ ಮೇಲ್ವಿಚಾರಕರನ್ನು ಲಾಟರಿ ಪದ್ಧತಿ ಮೂಲಕ ನೇಮಕ ಮಾಡಬೇಕು. ಪರೀಕ್ಷಾ ಸಿಬ್ಬಂದಿಗೆ ಗುರುತುಪತ್ರ ನೀಡಬೇಕು ಎಂದು ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ ಗಿರೀಶ ಸ್ವಾದಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಉಮೇಶಪ್ಪ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ವಿವಿಧ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.