ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಲಂಚವಿಲ್ಲದೆ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಅವರು ನೌಕರರಿಂದ ಲಂಚ ಪಡೆದಿದ್ದಾರೆ ಎಂಬ ಆಡಿಯೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದ್ದು ಈಗ ಭಾರಿ ಸದ್ದು ಮಾಡುತ್ತಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ಇಂಡಿ ಘಟಕದ ಚಾರ್ಜ್‌ಮನ್ ಅವರ ಮುಕ್ತಾಯದ ಹಂತದಲ್ಲಿರುವ ಅನುಬಂಧ 23 ರ ಆಪಾದನಾ ಪತ್ರದ ವಿಚಾರಣೆ ಮುಕ್ತಾಯ ಮಾಡಿ ಅಂತಿಮ ಆದೇಶ ಮಾಡಲು ಹಾಗೂ 2) 22 ರಲ್ಲಿರುವ 2 ಆಪಾದನಾ ಪತ್ರಗಳನ್ನು ಮುಕ್ತಾಯ ಮಾಡಿ ಅಂತಿಮ ಆದೇಶ ಮಾಡಲು ಒಟ್ಟು 25000 ರೂ.ಗಳನ್ನು ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣನಾಧಿಕಾರಿ ನಾರಾಯಣಪ್ಪ ಕುರಬರ ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮತ್ತೊಂದು ವಿಜಯಪುರ ವಿಭಾಗದ ಬಸವನ ಬಾಗೇವಾಡಿ ಘಟಕದ ನಿರ್ವಾಹಕರೊಬ್ಬರ ಆಮಾನತು ಆದೇಶವನ್ನು ತಡೆಯಲು 25000 ರೂ.ಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಪಡೆದಿರುತ್ತಾರೆ. ಆದರೂ ಆ ಅಮಾನತು ಆದೇಶವನ್ನು ತಡೆಯದೇ ಅಮಾನತು ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಅದರಿಂದ ಕೋಪಗೊಂಡು ನಿರ್ವಾಹಕ ಮೀಡಿಯೇಟರ್ ಅವರಿಗೆ ಹಣ ಮರಳಿ ನೀಡಲು ಒತ್ತಾಯ ಮಾಡಿರುವ ಸಂಭಾಷಣೆಯುಳ್ಳ ಆಡಿಯೋ ವಿಜಯಪಥಕ್ಕೆ ಸಿಕ್ಕಿದೆ.
ಇನ್ನೊಂದು ವಿಜಯಪುರ ವಿಭಾಗದ ಇಂಡಿ ಘಟಕದ ಸಹಾಯಕ ಲೆಕ್ಕಿಗ (ಕ್ಲರ್ಕ್) ಅವರನ್ನು ಇಂಡಿ ಘಟಕದಿಂದ ವಿಜಯಪುರ ವಿಭಾಗೀಯ ಕಚೇರಿಗೆ ವರ್ಗಾವಣೆ ಮಾಡಲು ಒಟ್ಟು 20000 ರೂ.ಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಪಡೆದುಕೊಂಡು ವಿಭಾಗೀಯ ಕಚೇರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದ ಸಂಭಾಷಣೆ ವಿಡಿಯೋ ಕೂಡ ವಿಜಯಪಥಕ್ಕೆ ಲಭ್ಯವಾಗಿದೆ.
ಇದಿಷ್ಟೇ ಅಲ್ಲದೇ ವಿಜಯಪುರ ವಿಭಾಗದಲ್ಲಿ ಕಿರಿಯ ಸಹಾಯಕರಾಗಿ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು 55 ಸಾವಿರ ರೂ. ಗಳ ಬೇಡಿಕೆ ಇಟ್ಟಿರುವ ಸಂಭಾಷಣೆಯ ಆಡಿಯೋ ಕೂಡ ನಿಮ್ಮ ವಿಜಯಪಥ ನ್ಯೂಸ್ ಗೆ ಸಿಕ್ಕಿದೆ.
ಇನ್ನೂ ರೋಚಕ ಎಂದರೆ ಇದೇ ವಿಜಯಪುರ ವಿಭಾಗದ ವಿಜಯಪುರ ಘಟಕ-3ರಲ್ಲಿ ನಿರ್ವಾಹಕರಿಗೆ ಕಂಟ್ರೋಲರ್ ಪ್ರಮೋಷನ್ (ಬಡ್ತಿ) ನೀಡಲು 50 ಸಾವಿರ ರೂ. ಗಳ ಬೇಡಿಕೆ ಇಟ್ಟ ವಿಡಿಯೋ. ಹಣ ಕೊಡದೆ ಇದಿದ್ದಕ್ಕೆ ಅನುಭಂದ 23 ರಲ್ಲಿ ಆಪಾದನಾ ಪತ್ರ ನೀಡಿ ಪ್ರಮೋಷನ್ ಬರದಂತೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಮಾಡಿದ್ದಾರೆ ಎಂಬ ಆರೋಪವು ಅವರ ಮೇಲೆ ಕೇಳಿ ಬಂದಿದೆ.
ಹೀಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಲಂಚದ ಬೇಡಿಕೆ ಇಟ್ಟು ನೌಕರರನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಆ ಕುರಿತ ವಿಡಿಯೋ ಮತ್ತು ಆಡಿಯೋಗಳು ವಿಜಯಪಥ ಆಫೀಸ್‌ನಲ್ಲಿ ಲಭ್ಯವಿದೆ.
ಇನ್ನಾದರೂ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನೌಕರರ ಸುಲಿಗೆ ಮಾಡುವ ಮಾನಸಿಕ ಹಿಂಸೆ ನೀಡುವ ಇಂಥ ನೀಚ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ನೊಂದ ನೌಕರರು ಒತ್ತಾಯಿಸಿದ್ದಾರೆ.
ಇನ್ನು ವಿಡಿಯೋ ಮತ್ತು ಆಡಿಯೋಗಳನ್ನು ಬಹಿರಂಗಪಡಿಸಿದರೆ ನೌಕರರಿಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಅವುಗಳನ್ನು ವಿಜಯಪಥದಲ್ಲಿ ಪ್ರಸಾರ ಮಾಡುತ್ತಿಲ್ಲ.
ಸಂಸ್ಥೆಯ ಕೇಂದ್ರ ಕಚೇರಿಯ ಭದ್ರತಾ ವಿಭಾಗದಿಂದ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಆದ್ದರಿಂದ ಸತ್ಯಾಂಶ ಹೊರ ಬರುವವರೆಗೂ ನಾವು ಆ ಬಗ್ಗೆ ಏನು ಮಾತನಾಡುವುದಿಲ್ಲ. ಭದ್ರತಾ ವಿಭಾಗದಿಂದ ತನಿಖೆ ಪೂರ್ಣಗೊಂಡ ನಂತರ ಎಲ್ಲವೂ ಬಹಿರಂಗವಾಗಲಿದೆ. ಹೀಗಾಗಿ ಆರೋಪದ ಬಗ್ಗೆ ಈಗ ಪ್ರತಿಕ್ರಿಯೆ ನೀಡೊಲ್ಲ.
l ನಾರಾಯಣಪ್ಪ ಕುರಬರ, ವಿಭಾಗೀಯ ನಿಯಂತ್ರಣಾಧಿಕಾರಿ, ವಿಜಯಪುರ