ಬಾಗಲಕೋಟೆ: ಸಕಾಲದ ಶಿಕ್ಷೆ ತಪ್ಪಿಸಿಕೊಳ್ಳಲು ಕೇವಲ ಹಿಂಬರಹ ಕೊಟ್ಟು ವಿಲೇವಾರಿ ಮಾಡಿದರೆ ಕಾನೂನಿಗೆ ಮೋಸ ಮಾಡಿದಂತಾಗುತ್ತಿದ್ದು, ಸರಿಯಾದ ಸಮಯಕ್ಕೆ ಪ್ರಕರಣಗಳ ವಿಲೆವಾರಿಗೆ ಕ್ರಮಕೈಗೊಳ್ಳುವಂತೆ ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಆಲಮಟ್ಟಿಯ ಕೆ.ಎಸ್.ಟಿ.ಡಿ.ಸಿ ಮಯೂರ ಕೃಷ್ಣಾ ಹೋಟಲ್‍ನಲ್ಲಿ ಶನಿವಾರ ಜರುಗಿದ ಹುನಗುಂದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳೆ ಪ್ರಕರಣಗಳ ವಿಲೇವಾರಿ ಮಾಡಲು ಕೈಕೊಂಡ ಕ್ರಮ, ಬಾಕಿ ಪ್ರಕರಣಗಳ ವಿಲೇವಾರಿ ಮಾಡಲು ಏಕೇ ತಡವಾಗುತ್ತಿದೆ. ಒಂದೇ ಕೆಲಸಕ್ಕೆ ಸಾರ್ವಜನಿಕರು ಪದೇ ಪದೇ ಸರ್ಕಾರಿ ಕಚೇರಿಗೆ ಅಲೆದಾಡಲು ತಪ್ಪಿಸುವ ಕೆಲಸವಾಗಬೇಕೆಂದು ಹುನಗುಂದ ತಹಶೀಲ್ದಾರ್ ಬಸವಲಿಂಗಪ್ಪ ಅವರಿಗೆ ಸೂಚಿಸಿದರು.
ಮಾನವೀಯತೆ ಘನತೆ ಇರುವಂತಹ ದೇಶದಲ್ಲಿ ಬಯಲು ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಸರ್ಕಾರದ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳಿಗೆ ಸಾರ್ವಜನಿಕರ ನೋವು ಗೊತ್ತಾಗುವುದಿಲ್ಲ.
ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಹರಡುವದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ತಾ.ಪಂ ಇಓಗಳು ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಎಲ್ಲಾ ಪಂಚಾಯತ ಪಿ.ಡಿ.ಓಗಳಿಗೆ ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ವರದಿಯನ್ನು ಪಡೆದುಕೊಳ್ಳಬೇಕು.
ಸರ್ಕಾರದಿಂದ ಶೌಚಾಲಯ ಕಟ್ಟಲು ಮತ್ತು ಅನುಮತಿ ಪಡೆದುಕೊಂಡು ಅವುಗಳನ್ನು ಕಟ್ಟದೇ ಇರದಂತಹ, ಕಟ್ಟಿಸಿಕೊಂಡು ಉಪಯೋಗಿಸದೇ ಇರುವಂತಹ ಹಾಗೂ ಕಟ್ಟಿಸಿ ಅವುಗಳನ್ನು ಸರಿಯಾಗಿ ಉಪಯೋಗಿಸದೇ ಇರುವದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ.
ಸರ್ಕಾರದಿಂದ ಪಡೆದುಕೊಂಡ ಅನುದಾನವು ಸತ್ಪಾತ್ರಕ್ಕೆ ಉಪಯೋಗವಾಗಬೇಕು. ತಾಲೂಕಿನ ಎಲ್ಲಾ ಗ್ರಾಮ, ನಗರದಲ್ಲಿ ಬಯಲು ಶೌಚಾಲಯ ಮುಕ್ತ ನಿರ್ಮೂಲನೆ ಮಾಡಿ ನೈರ್ಮಲ್ಯ ಮುಕ್ತ ಗ್ರಾಮವನ್ನಾಗಿ ಅಧಿಕಾರಿಗಳು ಶ್ರಮಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕೋವಿಡ್-19 ಮೂರನೇ ಅಲೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡ ಬಗ್ಗೆ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಬೆಳ್ಳನ್ನವರಿಗೆ ವಿವರಣೆಯನ್ನು ಕೇಳಲಾಗಿ ಇದಕ್ಕೆ ಪ್ರತಿಕ್ಷಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸದ್ಯ ಶಾಲೆಗಳು ಪ್ರಾರಂಭವಾಗಿದ್ದು, ಸಿ.ಆರ್.ಸಿ ಮತ್ತು ಬಿ.ಆರ್.ಸಿ, ಇಓ. ತಹಶೀಲ್ದಾರ್‌ಗಳನ್ನೊಳಗೊಂಡ ತಂಡ ರಚನೆ ಮಾಡಿಕೊಂಡು ಆಕಸ್ಮಿಕವಾಗಿ ಶಾಲೆಗಳಿಗೆ ಭೇಟಿ ನೀಡಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಿ ಶಾಲೆಗಳನ್ನು ನಿಯಮಿತವಾಗಿ ಸ್ಯಾನಿಟೈಜರ ಮಾಡಿಸುತ್ತಿರುವುದಾಗಿ ಸಭೆಗೆ ತಿಳಿಸಿದರು.
ತಾಲೂಕಿನಲ್ಲಿರುವ ಕೆರೆಗಳ ಮಾಹಿತಿ ಕೇಳಿದಾಗ ತಾಲೂಕಿನಲ್ಲಿ ಒಟ್ಟು 7 ಕೆರೆಗಳು ಇದ್ದು, ಅವುಗಳಲ್ಲಿ ಹಿರೇಮಾಗಿ ಗ್ರಾಮದ ಕೆರೆಯಲ್ಲಿ ರೈತರು 12 ಎಕರೆ 31 ಗುಂಟೆ ಜಾಗೆಯಲ್ಲಿ ಒತ್ತುವಾರಿ ಮಾಡಿಕೊಂಡು ತೊಗರಿಬೆಳೆ ಬೆಳೆದಿದ್ದಾರೆ. ಫಸಲು ಬಂದ ನಂತರ ಕೆರೆಯ ಒತ್ತುವರಿ ಮಾಡಿಕೊಂಡ ಭೂಮಿಯನ್ನು ತೆರವುಗೊಳಿಸುವ ಮೂಲಕ ಕೆರೆಯನ್ನು ಅಭಿವೃದ್ದಿಪಡಿಸಿ, ಕೆರೆ ಬದುವಿಗೆ ತಂತಿ ಬೆಲಿ ಹಾಕಲಾಗುತ್ತದೆ.
ಕೆನಾಲ್ಲಮೂಲಕ ಕೆರೆಯನ್ನು ತುಂಬಿಸಲು ಈಗಾಗಲೇ ಮೇಲಾಧಿಕಾರಿಗಳಿಗೆ ಪ್ರಸ್ತಾವಣೆಯನ್ನು ಕಳಿಸಿರುವುದಾಗಿ ಸಣ್ಣ ನೀರಾವರಿ ಇಲಾಖೆಯ ಎಇಇ ಆರ್.ಎನ್.ಕುಂಬಾರ ತಿಳಿಸಿದರು.
ಪಿ.ಆರ್.ಇ.ಡಿ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಎಷ್ಟು? ಅವುಗಳ ಪೈಕಿ ದೊಡ್ಡ ಕೆರೆ ಯಾವುದು? ಹಾಗೂ ಅದನ್ನು ಅಭಿವೃದ್ದಿಪಡಿಸಲು ಕೈಕೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದಾಗ ಹುನಗುಂದ ತಾಲೂಕಿನ ಪಿ.ಆರ್.ಇ.ಡಿಯ ಎಇಇ ಶಿವರಾಜ ನಾಯಕ ಮಾತನಾಡಿ, ಪಿಆರ್‍ಇಡಿ ವ್ಯಾಪ್ತಿಯಲ್ಲಿ ಸೂಳಿಭಾವಿ ಕೆರೆ ದೊಡ್ಡದು ಇದ್ದು, 7 ಎಕರೆ 2 ಗುಂಠೆ ವಿಸ್ತೀರ್ಣ ಹೊಂದಿರುತ್ತದೆ. ಎನ್.ಆರ್.ಇ.ಜಿ ಅಡಿಯಲ್ಲಿ ಕೆರೆಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವದಾಗಿ ತಿಳಿಸಿದರು.
ಮುಂದುವರಿದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕಾಮಗಾರಿ ನಡೆಯುವಾಗ ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಧಿಕಾರಿಗಳ ಮೇಲೆ ವರದಿಯನ್ನು ಸಲ್ಲಿಸುವಂತೆ ಮಾನ್ಯ ಉಪ-ಲೋಕಾಯುಕ್ತರವರು ಸೂಚಿಸಿದರು.
ತಾಲೂಕಿನ ಮಲಪ್ರಭೆ ಎಡದಂಡೆ ಕಾಲುವೆ ಅಧಿಕಾರಿಗಳಿಗೆ ಅಚ್ಚುಕಟ್ಟು ಪ್ರದೇಶದ ಕಾಮಗಾರಿಗಳಿಗೆ ಸರಕಾರ ನೀಡುವ ಅನುದಾನದ ಸಮರ್ಪಕ ಬಳಕೆ, ಕಾಲುವೆಯಿಂದ ರೈತರ ಜಮೀನುಗಳಿಗೆ ನೀರು ಸರಿಯಾದ ರೀತಿಯಲ್ಲಿ ಪೂರೈಕೆ ಆಗುವ ರೀತಿಯಲ್ಲಿ ಸೂಕ್ತ ಅನುಕೂಲತೆಗಳ ಬಗ್ಗೆ ನಿಗಾವಹಿಸಲು ಮತ್ತು ಕಾಲುವೆಗಳ ಹೂಳೆತ್ತುವ ಹಾಗೂ ದುರಸ್ತಿ ಮಾಡುವ ಕಾಮಗಾರಿಗಳಲ್ಲಿ ವೈಯಕ್ತಿಕ ಕಾಳಜಿವಹಿಸಿ.
ಕೆಲಸಗಳು ಅಂದಾಜು ಪತ್ರಿಕೆ ಹಾಗೂ ಅಳತೆ ಪುಸ್ತಕದಂತೆ ನಿರ್ವಹಿಸಲು ಕ್ರಮ ಜರುಗಿಸಲು ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು. ಈ ಬಗ್ಗೆ ದೂರುಗಳು ಬಂದಲ್ಲಿ ಸ್ವಯಂ ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮ ಜರುಗಿಸುವದಾಗಿ ಉಪ-ಲೋಕಾಯುಕ್ತರು ಎಚ್ಚರಿಕೆ ನೀಡಿದರು.
ರೈತರಿಗೆ ಗಿಡಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಬೇಕು, ಕಾಯ್ದಿಟ್ಟ ಅರಣ್ಯ ಪ್ರದೇಶದ ವಿಸ್ತಾರದಲ್ಲಿ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ತಡೆಗಟ್ಟಲು ಬೌಂಡರಿ ನಿರ್ಮಾಣ, ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಿಡ ನೆಡುವದು ಹಾಗೂ ಅವುಗಳನ್ನು ಪೋಷಣೆ ಮಾಡಲು ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ನೀಡಿ, ಸದರಿ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸುವ ಬಗ್ಗೆ ಹಾಗೂ ಅತಿಕ್ರಮಣ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳಲು ಸೂಚಿಸಿದು.
ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗೆಳಿಗೆ ಸರಕಾರ ಬಿಡುಗಡೆ ಮಾಡುವ ಅನುದಾನ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಿ ಅಭಿವೃದ್ದಿಯತ್ತ ಗಮನಹರಿಸಲು ಸೂಚಿಸಿದರು.
ಹುನಗುಂದ ತಾಲೂಕು ಮಟ್ಟದ ಅಧಿಕಾರಿಗಳಾದ ತಹಶೀಲ್ದಾರ ಮತ್ತು ತಾ.ಪಂ ಕಾರ್ಯನಿರ್ವಹಕ ಅಧಿಕಾರಿಗಳ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಪಾಲನಾ ವರದಿಯನ್ನು ಸಲ್ಲಿಸಲು ಉಪ ಲೋಕಾಯುಕ್ತರು ಗಡುವು ನೀಡಿದರು.
ವಿಜಯಪುರದ ಲೋಕಾಯುಕ್ತ ಇಲಾಖೆಯ ಪೊಲೀಸ್ ಅಧೀಕ್ಷಕಿ ಅನಿತಾ ಹದ್ದನ್ನವರ, ಬಾಗಲಕೋಟೆ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಅರುಣ ನಾಯಕ, ವಿಜಯಪುರದ ಉಪಾದೀಕ್ಷಕರ ಬಸವರಾಜ ಎಲಿಗಾರ, ಹುನಗುಂದ ತಹಶೀಲ್ದಾರ ಬಸವಲಿಂಗಪ್ಪ, ತಾ.ಪಂ ಇಓ ಚಂದ್ರಕಾಂತ ಮ್ಯಾಗೇರಿ ಸೇರಿದಂತೆ ಇತರೆ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ವಿಜಯಪುರ ಲೋಕಾಯುಕ್ತ ಇಲಾಖೆಯ ಎಸ್.ಪಿ. ಎಲ್ಲರಿಗೂ ವಂದಿಸಿದರು.