ಸಂಚಾರಿ ನಿರೀಕ್ಷಕರಿಂದ ಹಲ್ಲೆಗೊಳಗಾದ ಚಾಲಕ ಕಂ. ನಿರ್ವಾಹಕನನ್ನೇ ಅಮಾನತು ಮಾಡಿದ ಹಾವೇರಿ ವಿಭಾಗದ ಸಾರಿಗೆ ಡಿಸಿ
ಹಾವೇರಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಹಾನಗಲ್ ಘಟಕದ ಚಾಲಕ ಕಂ. ನಿರ್ವಾಹಕರೊಬ್ಬರಿಗೆ ಡ್ಯೂಟಿ ಕೊಡದೆ ಹಲ್ಲೆ ಮಾಡಿದ ಸಂಚಾರಿ ನಿರೀಕ್ಷರನ್ನು ವಿಚಾರಣೆ ಮಾಡುವ ಬದಲಿಗೆ ಚಾಲಕ ಕಂ. ನಿರ್ವಾಹಕರೊಬ್ಬರನ್ನೇ ಅಮಾನತು ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಆಗಸ್ಟ್ 4 ರಂದು ಘಟಕದ ಚಾಲಕ ಕಂ. ನಿರ್ವಾಹಕ ಎಸ್.ಎಂ.ಲಾಳಸೇರಿ ಅವರು ಡ್ಯೂಟಿಗೆ ಹಾಜರಾಗಿದ್ದಾರೆ. ಈ ವೇಳೆ ಅವರಿಗೆ ಡ್ಯೂಟಿ ಕೊಡಬೇಕಾದ ಸಂಚಾರಿ ನಿರೀಕ್ಷಕ ಎನ್.ಬಿ.ಚೌವ್ಹಾಣ್ ಅವರು ಕರ್ತವ್ಯಕ್ಕೆ ನಿಯೋಜಿಸದೆ ಅವಾಚ್ಯವಾಗಿ ಬೈದಿದ್ದಾರೆ. ಅಲ್ಲದೆ ದೈಹಿಕ ಹಲ್ಲೆಯನ್ನು ಮಾಡಿದ್ದು, ಮೂಗಿನ ಮೇಲೆ ಗುದಿದ್ದರಿಂದ ರಕ್ತ ಬಂದಿದ್ದು ತೀವ್ರ ನೋವಾಗಿದೆ. ಜತೆಗೆ ಎದೆಗೆ ಹೊಡೆದಿದ್ದರಿಂದ ಕೆಳಗೆ ಬಿದ್ದಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದಾರೆ.
ಇದು ಅಲ್ಲದೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಸ್.ಎಂ.ಲಾಳಸೇರಿ ದೂರು ನೀಡಿದ್ದರು, ಆ ವೇಳೆ ನೀವು ಇಬ್ಬರು ಒಂದೇ ನಿಗಮದ ನೌಕರರು ಹೀಗಾಗಿ ಗಲಾಟೆ ಮಾಡಿಕೊಂಡು ಮುಂದಕ್ಕೆ ಹೋಗುವುದು ಬೇಡ ಎಂದು ನಿಗಮದ ಹಿರಿಯ ಅಧಿಕಾರಿಗಳು ಇಬ್ಬರಿಗೂ ಹೇಳಿದ್ದರು. ಜತೆಗೆ ಪೊಲೀಸ್ ಠಾಣೆಯಲ್ಲೂ ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಸಂಚಾರಿ ನಿರೀಕ್ಷಕ ಎನ್.ಬಿ.ಚೌವ್ಹಾಣ್ ಹೇಳಿಕೆ ನೀಡಿದ್ದಾರೆ.
ಈ ಎಲ್ಲ ಬೆಳವಣಿಗೆ ಆದ ಬಳಿಕ ಅಂದರೆ ಆಗಸ್ಟ್ 26ರಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾನಗಲ್ ಘಟಕದ ಚಾಲಕ ಕಂ. ನಿರ್ವಾಹಕ ಎಸ್.ಎಂ.ಲಾಳಸೇರಿ ಅವರನ್ನು ಅಮಾತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನು ಗಮನಿಸಿದರೆ ಇಲ್ಲಿ ಹಲ್ಲೆಗೆ ಒಳಗಾಗಿರುವ ನೌಕರರ ರಕ್ಷಣೆಗೆ ಬಂದು ಕಾನೂನಾತ್ಮಕವಾಗಿ ನ್ಯಾಯ ಕೊಡಬೇಕಾದ ಅಧಿಕಾರಿಯೇ ಇಲ್ಲಿ ಹಲ್ಲೆಗೊಳಗಾದ ನೌಕರನ ವಿರುದ್ಧವೇ ಅಮಾನತು ಮಾಡುವ ಮೂಲಕ ಕ್ರಮ ಜರುಗಿಸಿರುವುದು ಸರಿಯೇ? ಜತೆಗೆ ಹಲ್ಲೆ ಮಾಡಿದ ಸಂಚಾರಿ ನಿರೀಕ್ಷಕ ಎನ್.ಬಿ.ಚೌವ್ಹಾಣ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಅವರನ್ನು ಸೇವೆಯಲ್ಲಿ ಮುಂದುವರಿಸುತ್ತಿರುವುದು ಏಕೆ ಎಂಬುದರ ಬಗ್ಗೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಟನೆ ಕೊಡಬೇಕಿದೆ.
ಸಾರಿಗೆ ನೌಕರರ ವಿರುದ್ಧ ಸಣ್ಣಪುಟ್ಟ ಕಾರಣಕ್ಕೆ ಈ ರೀತಿ ಅಮಾನತು ಶಿಕ್ಷೆ ನೀಡುವುದು ಸರಿಯಲ್ಲ ನಿಗಮದಲ್ಲಿ ಏನು ಕಾನೂನಿದೆಯೋ ಅದು ಸಂಸ್ಥೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೂ ಅನ್ವಯವಾಗಬೇಕು. ಅದನ್ನು ಬಿಟ್ಟು ಒಬ್ಬೊಬ್ಬರಿಗೊಂದು ನ್ಯಾಯ ಎಂದು ನಡೆದುಕೊಳ್ಳಬಾರದು ಎಂದು ನೌಕರರು ಅಸಮಾಧಾನ ಹೊರಹಾಕಿದ್ದಾರೆ.
ತನಿಖಾ ವರದಿ ಮೇಲೆ ಎಸ್.ಎಂ.ಲಾಳಸೇರಿ ಅಮಾನತು – ಜಗದೀಶ್ ನಾಯಕ್: ವಾಕರಸಾಸಂಸ್ಥೆಯ ಹಾನಗಲ್ ಘಟಕದ ಚಾಲಕ ಕಂ. ನಿರ್ವಾಹಕ ಎಸ್.ಎಂ.ಲಾಳಸೇರಿ ಅವರನ್ನು ಅಮಾನತು ಮಾಡಿರುವುದು ನನಗೆ ಸರಿಯಾಗಿ ನೆನಪಿಲ್ಲ. ನಾವು ಪ್ರತಿ ಘಟಕಗಳಿಗೂ ಹೋಗಿ ಮಾಹಿತಿ ಕಲೆಹಾಕಲು ಸಾಧ್ಯವಿಲ್ಲದ ಕಾರಣ ನಮ್ಮ ಭದ್ರತಾ ಸಿಬ್ಬಂದಿ ನೀಡಿರುವ ತನಿಖಾ ವರದಿ ಮೇಲೆ ಈ ಅಮಾನತು ಕ್ರಮ ತೆಗೆದುಕೊಂಡಿರಬಹುದು. ಆ ಬಗ್ಗೆ ಮತ್ತೊಮ್ಮೆ ನೋಡುತ್ತೇವೆ.
ಇನ್ನು ಚಾಲಕ ಕಂ. ನಿರ್ವಾಹಕ ಎಸ್.ಎಂ.ಲಾಳಸೇರಿ ಅವರ ಮೇಲೆ ಹಲ್ಲೆ ಮಾಡಿರುವ ಸಂಚಾರಿ ನಿರೀಕ್ಷಕರ ವಿರುದ್ಧ ಏನು ಕ್ರಮ ಜರುಗಿಸಲಾಗಿದೆ ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಸಿಗುತ್ತಿಲ್ಲ ಅದನ್ನು ನೋಡಿ ಹೇಳುತ್ತೇವೆ ಎಂದು ವಿಜಯಪಥ ವರದಿಗಾರರು ಫೋನ್ ಕರೆ ಮಾಡಿದ ವೇಳೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ನಾಯಕ್ ತಿಳಿಸಿದ್ದಾರೆ.
ನಾನು ಆಗಸ್ಟ್ 3ರಂದು ವಾರದ ರಜೆ ತೆಗೆದುಕೊಂಡಿದ್ದೆ, ಬಳಿಕ ಆ.4ರಂದು ಬೆಳಗ್ಗೆ 8.30ಕ್ಕೆ ಕರ್ತವ್ಯಕ್ಕೆ ಘಟಕದಲ್ಲಿ ಹಾಜರಾದೆ. ಈ ವೇಳೆ ಇಂದು ಘಟಕದಲ್ಲಿ ಚಾಲನ ಸಿಬ್ಬಂದಿ ಹೆಚ್ಚಾಗಿದ್ದು ನೀನು ಮನೆಗೆ ಹೋಗು ಎಂದು ನನಗೆ ಗೈರು ಹಾಜರಿ ಮಾಡಲು ಮುಂದಾದರು. ಆ ವೇಳೆ ನಾನು ಕರ್ತವ್ಯಕ್ಕೆ ಬಂದಿದ್ದರೂ ನೀವು ನನಗೆ ಗೈರಾಗಿದ್ದಾರೆ ಎಂದು ತೋರಿಸುತ್ತಿರುವುದೇಕೆ ಎಂದು ಸಂಚಾರಿ ನಿರೀಕ್ಷಕ ಎನ್.ಬಿ.ಚೌವ್ಹಾಣ್ ಅವರನ್ನು ಕೇಳಿದೆ. ಅವರು ಅದಕ್ಕೆ ನಮ್ಮಿಷ್ಟ ನೀನು ಬಂದ ಕೂಡಲೇ ಕೆಲಸ ಕೊಡಬೇಕಾ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನನ್ನ ಮೂಗಿನ ಮೇಲೆ ಗುದ್ದಿದ್ದರಿಂದ ರಕ್ತಶ್ರಾವ ಕೂಡ ಆಯಿತು, ಅಲ್ಲದೆ ನನ್ನ ಎದೆಗೆ ಹೊಡೆದು ಕೆಳಕ್ಕೆ ಬೀಳಿಸಿದ್ದರು. ನಾನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟೆ, ಬಳಿಕ ರಾಜಿ ಸಂಧಾನ ಮಾಡಿದರು. ಆದರೆ, ಅದಾದ 22ದಿನಗಳ ಬಳಿಕ ನನಗೆ ಅಮಾನತು ಆದೇಶ ಮಾಡಿದ್ದಾರೆ. ಅಂದರೆ ನನ್ನ ಮೇಲೆ ಹಲ್ಲೆ ಮಾಡಿದ ಸಂಚಾರಿ ನಿರೀಕ್ಷ ಕಎನ್.ಬಿ.ಚೌವ್ಹಾಣ್ ಅವರ ವಿರುದ್ಧ ಕ್ರಮ ಜರುಗಿಸಿಲ್ಲ. ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇದು ಎಷ್ಟು ಸರಿ?.
l ಎಸ್.ಎಂ.ಲಾಳಸೇರಿ, ಚಾಲಕ ಕಂ. ನಿರ್ವಾಹಕ, ವಾಕರಸಾಸಂ ಹಾನಗಲ್ ಘಟಕ