ಬೆಂಗಳೂರು: ನವರಾತ್ರಿ ಮೊದಲ ದಿನವಾದ ಗುರುವಾರ ಆದಾಯ ತೆರಿಗೆ ಇಲಾಖೆ ಹಣವಿದ್ದವರ ನೆಮ್ಮದಿಗೆಡಿಸಿದೆ. ರಾಜ್ಯದ ವಿವಿಧೆಡೆ ಬರೊಬ್ಬರಿ 50 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅದರಲ್ಲಿಯೂ ಮಾಜಿ ಮುಖ್ಯಮಂತ್ರಿ ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ದಾಳಿ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬಿಎಂಟಿಸಿ ಚಾಲಕರಾಗಿದ್ದ ಉಮೇಶ್ ಮನೆ ಮೇಲೆ ಐಟಿ ದಾಳಿಯಾಗಿದ್ದು, ಇದನ್ನು ನಂಬುವುದು ನಿಜಕ್ಕೂ ಕಷ್ಟ. ಆದರೆ ಆಗಿರುವುದು ಮಾತ್ರ ನಿಜ. ಹಾಗಂತ ಅವರು ಪೂರ್ಣ ಪ್ರಮಾಣದಲ್ಲಿ ಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸಿಲ್ಲ. ನೇಮಕವಾಗಿದ್ದು ಮಾತ್ರ ಬಿಎಂಟಿಸಿ ನಿರ್ವಾಹಕ ಕಂ ಚಾಲಕರಾಗಿ ಎಂಬ ಮಾಹಿತಿಯಿದೆ.
ಅದು ಬೆಂಗಳೂರಿನ ಯಲಹಂಕದ ಪುಟ್ಟೇನಹಳ್ಳಿಯ ಬಿಎಂಟಿಸಿ ಡಿಪೋದಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ ಉಮೇಶ್. ಆದರೆ ಉಮೇಶ್ ಬಿಎಂಟಿಸಿಯಲ್ಲಿ ಕೆಲಸ ಮಾಡಿದ್ದು ಕಡಿಮೆಯೇ. ಅವರು ಹೆಚ್ಚಾಗಿ ಕೆಲಸ ಮಾಡಿದ್ದು ಯಡಿಯೂರಪ್ಪ ಅವರೊಂದಿಗೆಯೆ. ಹೀಗಾಗಿ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಬೆಂಗಳೂರಿಗೆ ಬಂದಾಗ ರಾಘವೇಂದ್ರ ಅವರ ಕೆಲಸಗಳನ್ನು ಉಮೇಶ್ ನಿರ್ವಹಣೆ ಮಾಡುತ್ತಿದ್ದ.
ಹೀಗಾಗಿ ಇತ್ತೀಚೆಗೆ ಒಟ್ಟಾರೆ ಯಡಿಯೂರಪ್ಪ ಅವರ ಕುಟುಂಬದ ಎಲ್ಲರಿಗೂ ಉಮೇಶ್ ಅತ್ಯಾಪ್ತರಾಗಿದ್ದರು. ಸರ್ಕಾರದ ಕೆಲಸಗಳನ್ನು ಮಾಡಿಸುವಲ್ಲಿ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಿದ್ದರು.
ನೀರಾವರಿ ನಿಗಮದಲ್ಲಿ ನಡೆದಿದ್ದ ಟೆಂಡರ್ ಬಗ್ಗೆಯೂ ಬಿಜೆಪಿಯಲ್ಲಿ ಅಪಸ್ವರಗಳು ಕೇಳಿ ಬಂದಿದ್ದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಐಟಿ ದಾಳಿ ತೀವ್ರ ಕುತೂಹಲ ಮೂಡಿಸಿಗು, ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಆಗಿರುವ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಇದೇ ಮಾತನ್ನು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರೂ ಕಲಬುಗರಿಯಲ್ಲಿ ಹೇಳಿದ್ದಾರೆ.
ಇನ್ನು ನವರಾತ್ರಿ ಮೊದಲ ದಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಅವರ ಆಪ್ತರ ಮೇಲೆ ಆಗುತ್ತಿರುವ ಮೊದಲ ಐಟಿ ದಾಳಿ ಇದಾಗಿದೆ.
ಗುರುವಾರ ಬೆಳಗ್ಗೆ ಉಮೇಶ್ ಅವರಿಗೆ ಸೇರಿದ ನಾಲ್ಕೈದು ಆಸ್ತಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಬಿಎಂಟಿಸಿ ನೌಕರನಾಗಿದ್ದರೂ ಉಮೇಶ್ ವೃತ್ತಿ ಆರಂಭಿಸಿದ್ದು ಬಿಜೆಪಿ ನಾಯಕರ ಆಯನೂರು ಮಂಜುನಾಥ್ ಅವರಿಗೆ ಆಪ್ತ ಸಹಾಯಕನಾಗಿ. ನಂತರ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು.
ಬಳಿಕ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡಾಗಲೂ ಅವರೊಂದಿಗೆ ಉಮೇಶ್ ಇದ್ದರು. ಅವರ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಈಗ ಹೊರಗೆ ಬರುತ್ತಿದೆ.