ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಟ ಸಂಚಾರಿ ವಿಜಯ್ ಅವರ ಮಿದುಳು ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ.
ಇದು ಪರೀಕ್ಷೆಯ ಮೂಲಕ ದೃಢಪಟ್ಟಿದ್ದು, ರಾತ್ರಿ 9:30ಕ್ಕೆ ಅಂಗಾಂಗ ಬೇರ್ಪಡಿಸುವ ಕಾರ್ಯ ಆರಂಭವಾಗಲಿದೆ. ಇದು ಬೆಳಗ್ಗೆವರೆಗೂ ನಡೆಯಲಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯ ಡಾ.ಅರುಣ್ ನಾಯ್ಕ್ ಮಾಹಿತಿ ನೀಡಿದ್ದಾರೆ.
ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿ 36 ಗಂಟೆಯಾಗಿದೆ. ಮೊನ್ನೆ ಮಧ್ಯರಾತ್ರಿ ಸುಮಾರಿಗೆ ಆಸ್ಪತ್ರೆಗೆ ಅವರನ್ನು ಕರೆತಂದಾಗ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದರು. ಉಸಿರಾಡುತ್ತಿದ್ದ ಕಾರಣ ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಮಿದುಳಿನ ಬಲಭಾಗಕ್ಕೆ ತೀವ್ರ ಏಟಾಗಿತ್ತು. ಮಿದುಳಿನ ಒಳಗೆ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಅವರ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ ಸರ್ಜರಿ ಮಾಡಲು ನಿರ್ಧರಿಸಿದೆವು.
ತಕ್ಷಣವೇ ಸರ್ಜರಿಗೆ ಏರ್ಪಾಡು ಮಾಡಿ ನಸುಕಿನ ಜಾವ 4-4.30ರ ಹೊತ್ತಿಗೆ ಮಿದುಳಿನ ಸರ್ಜರಿ ಮಾಡಿ ಮುಗಿಸಿದೆವು, ನಂತರ ನ್ಯೂರೋ ಐಸಿಯು ವಿಭಾಗಕ್ಕೆ ವರ್ಗಾಯಿಸಿದೆವು. ರಕ್ತಸ್ರಾವವಾಗುತ್ತಿದ್ದುದನ್ನು ಸರ್ಜರಿ ಮಾಡಿ ನಿಲ್ಲಿಸಿದ್ದೇವೆ, ಆದರೆ ಮಿದುಳಿನ ಊತ ಕಡಿಮೆಯಾಗಿಲ್ಲ, ಕ್ಷಣಕ್ಷಣಕ್ಕೆ ಮಿದುಳು ನಿಷ್ಕ್ರಿಯವಾಗುತ್ತಿದೆ. ಈ ಹಂತದಲ್ಲಿ ನಾವು ಮಿದುಳು ನಿಷ್ಕ್ರಿಯತೆ ಎನ್ನುತ್ತೇವೆ, ಸದ್ಯ ಅವರು ವೆಂಟಿಲೇಟರ್ ನಲ್ಲಿದ್ದು ಸಂಪೂರ್ಣವಾಗಿ ಜೀವರಕ್ಷಕದಲ್ಲಿದ್ದಾರೆ, ಉಸಿರಾಟವನ್ನು ಕೂಡ ನಿಲ್ಲಿಸಿದ್ದಾರೆ. ವೆಂಟಿಲೇಟರ್ ತೆಗೆದರೆ ಮಿದುಳು ಸಂಪೂರ್ಣ ಸ್ತಬ್ಧವಾಗುತ್ತದೆ ಎಂದರು.
ಪ್ರಾಥಮಿಕವಾಗಿ ಬಿದ್ದ ಹೊಡೆತಕ್ಕೆ ಮಿದುಳು ಒಡೆದುಹೋಗಿದೆ, ಅದರಿಂದ ಚೇತರಿಕೆ ಕಂಡುಬರುತ್ತಿಲ್ಲ, ಏನೇ ಚಿಕಿತ್ಸೆ ಕೊಟ್ಟರೂ ಸ್ಪಂದಿಸುತ್ತಿಲ್ಲ, ನಿನ್ನೆ ರಾತ್ರಿಯಿಂದ ಉಸಿರಾಟ ಕೂಡ ನಿಲ್ಲಿಸಿದ್ದಾರೆ, ಅದರರ್ಥ ಅವರು ಸಂಪೂರ್ಣವಾಗಿ ವೆಂಟಿಲೇಟರ್ ಸಪೋರ್ಟಿನಿಂದ ಮಾತ್ರ ಇದ್ದಾರೆ ಎಂದು ವೈದ್ಯರು ಹೇಳಿದರು.
ತೊಡೆಯ ಮೂಳೆ ಮುರಿದಿರುವುದು ಈಗ ಮುಖ್ಯವಾಗುವುದಿಲ್ಲ. ಮಿದುಳು ಕೆಲಸ ಮಾಡದಿರುವುದೇ ಮುಖ್ಯವಾಗುತ್ತದೆ. ಸಂಚಾರಿ ವಿಜಯ್ ಅವರ ವ್ಯಕ್ತಿತ್ವ, ಕೆಲಸ, ಪ್ರತಿಭೆಯನ್ನು ನೋಡಿರುವ ನಾವೆಲ್ಲಾ ಅವರ ಅಂಗಾಂಗಳನ್ನು ದಾನ ಮಾಡಿದರೆ ಅವರ ನಂತರವೂ ವ್ಯಕ್ತಿತ್ವ ಉಳಿದುಕೊಳ್ಳುತ್ತದೆ, ಅದು ಕುಟುಂಬಸ್ಥರ ಮಹಾಶ್ರೇಷ್ಠ ನಿರ್ಧಾರ ಎಂದರು.
ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್ ತಲೆಗೆ ಏಟು ಬಿದ್ದಿತ್ತು. ತೀವ್ರವಾಗಿ ಏಟು ಬಿದ್ದ ಹಿನ್ನೆಲೆಯಲ್ಲಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಅವರ ಮಿದುಳು ಸಂಪೂರ್ಣವಾಗಿ ಕೆಲಸ ನಿಲ್ಲಿಸಿದೆ. ಈ ಮೂಲಕ ಅವರು ಮೃತಪಟ್ಟಿರುವುದು ಬಹುತೇಕ ಖಚಿತವಾದಂತಾಗಿದೆ.
ಸಂಚಾರಿ ವಿಜಯ್ರವರ ಎಲ್ಲ ಅಂಗಾಂಗ ಸಮರ್ಪಕವಾಗಿದೆ. 1 ಲಿವರ್, 2 ಕಿಡ್ನಿ, 2 ಕಣ್ಣು, ಹೃದಯದ ವಾಲ್ವ್ ಪಡೆಯುತ್ತಿದ್ದೇವೆ. ಮುಂದಿನ ಹೆಲ್ತ್ ಬುಲೆಟಿನ್ನಲ್ಲಿ ಅಪ್ಡೇಟ್ ಮಾಡುತ್ತೇವೆ. ಅಂಗಾಂಗ ಕಸಿ ಮಾಡುವ ಪ್ರಕ್ರಿಯೆ ಬೆಳಗ್ಗೆವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ.