- ಈ ಮೂವರ ಕನ್ನಡಾಭಿಮಾನ ಶೂನ್ಯತೆಗೆ ನನ್ನ ಧಿಕ್ಕಾರ
- ಸ್ವಾಭಿಮಾನಿ ಕನ್ನಡಿರೆಲ್ಲರೂ ಸಿಡಿದೇಳೋಣ. ಕರ್ನಾಟಕದಲ್ಲಿ ಕನ್ನಡವೇ ಮೊದಲು.
ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹಿಂದಿ ಭಾಷೆ ಇರಬೇಕಾದ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದು ಕನ್ನಡರಿಗೆ ಮತ್ತು ಕನ್ನಡ ಭಾಷೆಗೆ ಮಾಡುತ್ತಿರುವ ಅಪಮಾನ.
ಇಂಥ ಭಾಷಾಭಿಮಾನ ಇಲ್ಲದ ಸರ್ಕಾರದ ಜವಾಬ್ದಾರಿ ಹೊತ್ತವರಿಗೆ ಧಿಕ್ಕಾರ. ಇನ್ನೊಬ್ಬರ ಹಂಗಿನಲ್ಲೇ ಉಸಿರಾಡುವ ರಾಜ್ಯ ಬಿಜೆಪಿ ನಾಯಕರಿಗೆ ಸ್ವಲ್ಪವೂ ನಾಚಿಕೆಯೇ ಆಗುತ್ತಿಲ್ಲ. ಹುಟ್ಟಿ ಬೆಳೆದಿರುವ ನಾಡಿಗೆ ದ್ರೋಹ ಬಗೆಯುತ್ತಿರುವ ಇವರಿಗೆ ಮುಂದಿನ ದಿನಗಳಲ್ಲಿ ಕನ್ನಡಿಗರೇ ತಕ್ಕ ಪಾಠ ಕಲಿಸಬೇಕಿದೆ.
ಹೌದು ಈ ಬಗ್ಗೆ ಮಾಜಿ ಸಿಎಂ ಎಚ್‌ಡಿಕೆ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರದ ನಡೆಗೆ ಧಿಕ್ಕಾರ ಹೇಳಿದ್ದಾರೆ. ಅವರು ಹೇಳಿರುವುದು ಇಲ್ಲಿದೆ…
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 25ನೇ ಘಟಿಕೋತ್ಸವದಲ್ಲಿ ಹಿಂದಿಗೆ ಅಗ್ರಸ್ಥಾನ! ಇಂಗ್ಲೀಷ್ʼಗೆ ದ್ವಿತೀಯ ಸ್ಥಾನ! ಕನ್ನಡಕ್ಕೆ ಮೂರನೇ ಸ್ಥಾನ!! ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಇನ್ನೊಂದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೇದಿಕೆಯ ಮೇಲೆ ರಾಜ್ಯದ ಮುಖ್ಯಮಂತ್ರಿ, ಒಬ್ಬ ಸಚಿವರು, ಇಬ್ಬರು ಸಂಸದರು ಇದ್ದರು. ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು 3ನೇ ಸ್ಥಾನಕ್ಕಿಳಿಸಿದ್ದ ಆ ವೇದಿಕೆಯ ಮೇಲೆ ಕೂರಲು ಅವರಿಗೆ ಮನಃಸಾಕ್ಷಿಯಾದರೂ ಹೇಗೆ ಬಂತು? ಈ ಮೂವರ ಕನ್ನಡಾಭಿಮಾನ ಶೂನ್ಯತೆಗೆ ನನ್ನ ಧಿಕ್ಕಾರ.
ರಾಷ್ಟ್ರೀಯ ಪಕ್ಷಗಳ ದಾದಾಗಿರಿ ದಿನೇದಿನೆ ಹೆಚ್ಚುತ್ತಿದೆ. ನಮ್ಮ ನಾಡು-ನುಡಿಯ ಮೇಲೆ ದಿಲ್ಲಿ ರಾಜಕಾರಣ ನಡೆಸುತ್ತಿರುವ ಆಕ್ರಮಣ ಸ್ವಾತಂತ್ರ್ಯಕ್ಕೂ ಮುನ್ನ ವಿದೇಶಿ ಆಕ್ರಮಣಕಾರರು ನಡೆಸಿದ ದಾಳಿಗಿಂತ ಹೇಯವಾಗಿದೆ. ದೇಶ ಮೊದಲು ಎಂದು ಕೂಗುವ ನಾಲಿಗೆಗಳಿಗೆ ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಹೇಳಲು ಏನಾಗಿದೆ?
ದೇಶ ಮೊದಲು ಎಂದು ಕೂಗುವ ನಾಲಿಗೆಗಳಿಗೆ ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಹೇಳಲು ಏನಾಗಿದೆ? ಕನ್ನಡವನ್ನು ಕರ್ನಾಟದಿಂದಲೇ ಮೂಲೋತ್ಪಾಟನೆ ಮಾಡಬೇಕು ಎಂಬುದು ಬಿಜೆಪಿಯ ಹಿಡನ್ ಅಜೆಂಡಾವೇ?
ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ. ಕೇಂದ್ರ ಪರೀಕ್ಷೆಯಲ್ಲಿ ಅನ್ಯಾಯ, ನೇಮಕಾತಿಯಲ್ಲಿ ನಮ್ಮವರ ಕಡೆಗಣನೆ. ಒಕ್ಕೂಟ ವ್ಯವಸ್ಥೆಯಲ್ಲಿ ಪರಕೀಯರಂತೆ ಎರಡನೇ ದರ್ಜೆ ಪ್ರಜೆಗಳಾಗಿ ನಾವು ಕೊಳೆಯಬೇಕಾ?
ಸ್ವಾಭಿಮಾನಿ ಕನ್ನಡಿರೆಲ್ಲರೂ ಸಿಡಿದೇಳೋಣ. ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಮಾಜಿ ಸಿಎಂ ಎಚ್‌ಡಿಕೆ ಕರೆ ನೀಡಿದ್ದಾರೆ.