ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಸೋಮವಾರದಿಂದಲೇ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 8.16 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಜಿಲ್ಲಾ ವ್ಯಾಪ್ತಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ನಗರ, ಸಾಮಾನ್ಯ ಸಾರಿಗೆ ಮತ್ತು ದೂರ ಮಾರ್ಗದ ಸಾರಿಗೆಗಳನ್ನು ಶೇ. 50 ಆಸನ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸಲಾಗುವುದು ಎಂದು ತಿಳಿಸಿದ್ದಾರೆ.
ಜೂನ್ 28ರ ಬೆಳಗ್ಗೆ 6 ಗಂಟೆಯಿಂದ ಜನರ ಬೇಡಿಕೆ ಆಧರಿಸಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ನಿಗಮದ ಅಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸಾರಿಗೆ ಬಸ್ ಸಂಚಾರ ಕಳೆದ ಜೂ.21ರಿಂದಲೇ ಆರಂಭವಾಗಿತ್ತು.
ಆದರೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಿದೆ ಎಂದು ಜುಲೈ 5ರವರೆಗೂ ಲಾಕ್‌ಡೌನ್ ಮುಂದುವರಿಸುವುದಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ತಿಳಿಸಿದ್ದವು.
ಈಗ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿರುವುದರಿಂದ (ಸೋಮವಾರ) ಜೂನ್ 28ರಿಂದಲೇ ಬಸ್ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗಿದೆ.