ಮೈಸೂರು: ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಸಮಾರಂಭದಲ್ಲಿ ಆಕರ್ಶಕ ಕೇಂದ್ರಬಿಂದುವಾಗಿದ್ದು ಚೈತ್ರಾ ನಾರಾಯಣ ಹೆಗ್ಡೆ. ಕೆಲಸ ಮಾಡುತ್ತಲೇ ಓದಿನ ಮಹದಾಸೆ ಈಡೇರಿಸಿಕೊಂಡಿದ್ದಾರೆ.
ಜತೆಗೆ ಚೈತ್ರಾ ಬರೋಬ್ಬರಿ 20 ಚಿನ್ನದ ಪದಕ, 4 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಛಲವೊಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ಗ್ರಾಮೀಣ ಭಾಗದ ರೈತ ಕುಟುಂಬದ ಹೆಣ್ಣುಮಗಳು ಸಾಬೀತು ಮಾಡಿದ್ದಾಳೆ.
ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ಹಣ ಬೇಕು. ಹಣವಂತರ ಮಕ್ಕಳಿಗೆ ಮಾತ್ರ ವಿದ್ಯೆ ಎಂಬ ಮಾತನ್ನು ಅಲ್ಲಗಳೆದು, ಕಷ್ಟಪಟ್ಟು ಓದಿ ರಸಾಯನಶಾಸ್ತ್ರ ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದು, 20 ಚಿನ್ನದ ಪದಕ ಹಾಗೂ ನಾಲ್ಕು ದತ್ತಿ ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ ಶಿರಸಿಯ ಚೈತ್ರ ನಾರಾಯಣ ಹೆಗ್ಡೆ.
ಈ ಮೂಲಕ ಗ್ರಾಮೀಣ ಭಾಗದಲ್ಲೂ ಪ್ರತಿಭಾವಂತರಿದ್ದಾರೆ. ಅವರಿಗೂ ಗುಣಮಟ್ಟದ ಶಿಕ್ಷಣ ಸಿಕ್ಕರೆ ಏನು ಬೇಕಾದರೂ ಸಾಧಿಸಬಲ್ಲರು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಆರ್ಗ್ಯಾನಿಕ್, ಇನ್ ಆರ್ಗ್ಯಾನಿಕ್ ಮತ್ತು ಫಿಜಿಕಲ್ ಕೆಮಿಸ್ಟ್ರಿಯಲ್ಲಿ ತಲಾ 3 ಒದಗಳನ್ನು ಪಡೆದಿರುವ ಚೈತ್ರಾ ಒಟ್ಟಾರೆ ಅತಿ ಹೆಚ್ಚು ಫಲಿತಾಂಶ ಪಡೆದು ಇನ್ನೂ 11 ಪದಗಳ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಉತ್ತರಕನಡ ಜಿಲ್ಲೆಯ ಶಿರಸಿ ತಾಲ್ಲೂಕಿಗೆ 15 ಕಿ.ಮೀ ದೂರ ಶಿಗೆಳ್ಳಿ ಗ್ರಾಮದವರಾದ ಚೈತ್ರ ನಾರಾಯಣ್ ಹೆಗಡೆ ಮೂಲ ರೈತ ದಂಪತಿಯ ಮಗಳು. ತಂದೆ ನಾರಾಯಣ ಹೆಗ್ಡೆ, ತಾಯಿ ಸುಮಂಗಲಾ ಹೆಗ್ಡೆ, ಸಹೋದರ ಚಿನ್ಮಯ್ ಹೆಗಡೆ ಇವರ ಚಿಕ್ಕ ಕುಟುಂಬ.
ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಚೈತನ್ಯ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಬಿಎಸ್ಸಿ ಪದವಿಗಾಗಿ ಮೈಸೂರಿನ ಯುವರಾಜ ಕಾಲೇಜು ಸೇರಿದರು. ಅಲ್ಲಿಯೂ ಉತ್ತಮ ರ‍್ಯಾಂಕ್ ಪಡೆದು ಪದಕ ಪಡೆದಿದ್ದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿದರು. ಇದೀಗ ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸದ್ಯ ಮೈಸೂರು ವಿವಿ 101ನೇ ಘಟಿಕೋತ್ಸವದ ಟಾಪರ್ ಆಗಿರುವ ಚೈತ್ರಾ ಈ ಸಂತಸವನ್ನು ʻಆಂದೋಲನʼ ದಿನಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ನಮ್ಮ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಅಷ್ಟು ಸುಗಮವಾಗಿರಲಿಲ್ಲ. ಇದರೊಂದಿಗೆ ಇಂಜಿನಿಯರಿಂಗ್, ಡಾಕ್ಟರ್ ಯಾವುದೇ ಪದವಿ ಮಾಡಬೇಕೆಂದರೂ ಹೊರ ಜಿಲ್ಲೆಗೇ ಹೋಗಬೇಕಿತ್ತು.
ನಾನು 10ನೇ ತರಗತಿಯಲ್ಲಿ ಶೇ.98 ಫಲಿತಾಂಶ ಹಾಗೂ ಪಿಯು ನಲ್ಲಿ ಶೇ. 95 ಫಲಿತಾಂಶ ಪಡೆದಾಗ ಎಷ್ಟೋ ಜನ ಇಂಜಿನಿಯರಿಂಗ್ ಮಾಡುವಂತೆ ಸೂಚಿಸಿದರು. ಆದರೆ ನನ್ನ ಅಪ್ಪ-ಅಮ್ಮ ನನ್ನ ಆಯ್ಕೆಯ ಓದನ್ನೇ ಪ್ರೋತ್ಸಾಹಿಸಿದರು. ಜತೆಗೆ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ಓದಿನಕಡೆ ಗಮನಕೊಡುವಂತೆ ಸೂಚಿಸುತ್ತಿದ್ದರು.
ತಾವೂ ಕಷ್ಟ ಪಟ್ಟರೂ, ಕಾಲೇಜಿಗೆ, ಓದಿಗೆ ಬೇಕಾದ ಶುಲ್ಕವನ್ನು ತಪ್ಪದೇ ನೀಡುತ್ತಿದ್ದರು. ಅವರ ಸಹಕಾರ ನನ್ನ ಈ ಪುಟ್ಟ ಸಾಧನೆಗೆ ಅಡಿಗಲ್ಲು ಹಾಕಿದೆ. ನಿಜಕ್ಕೂ ಇಂದು ನನಗಿಂತಲೂ ಅಪ್ಪ-ಅಮ್ಮನಿಗೆ ಸಂತಸವಾಗಿದೆ ಎಂದು ಭಾವುಕರಾದರು.
ಪ್ರತಿದಿನ ಪಠ್ಯ ಪುನರಾವರ್ತನೆ: ಪ್ರತಿದಿನ ಅಧ್ಯಾಪಕರು ತರಗತಿಯಲ್ಲಿ ಹೇಳಿಕೊಟ್ಟದ್ದನ್ನು ಹಾಸ್ಟೆಲ್‌ಗೆ ಬಂದ ಪುನರಾವರ್ತನೆ ಮಾಡಿಕೊಳ್ಳುತ್ತಿದ್ದೆ. ಪಠ್ಯದ ವಿಚಾರವಾಗಿ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದೆ. ಹಾಗಾಗಿ, ಪಠ್ಯ ಹೆಚ್ಚು ನೆನಪಿನಲ್ಲಿ ಉಳಿಯುತ್ತಿತ್ತು. ಅದು ಹೊರತುಪಡಿಸಿದರೆ ಪರೀಕ್ಷೆಗೆ ಸೀರಿಯಸ್ ಆಗಿ ಓದುತ್ತಿರಲಿಲ್ಲ. ಪರೀಕ್ಷೆಗೆ ಒಂದು ತಿಂಗಳಿದೆ ಎನ್ನುವಾಗ ಮಾತ್ರ ಸೀರಿಯಸ್ ಆಗಿ ಓದುತ್ತಿದ್ದೆ ಎಂದು ಅಧ್ಯಯನದ ಪ್ರಕ್ರಿಯೆ ಬಗ್ಗೆ ಹೇಳಿದರು.
ಸಂಶೋಧಕಿಯಾಗುವ ಆಸೆ: ಚೈತ್ರಾ ಅವರು ಮುಂದೆ ರಸಾಯನಶಾಸ್ತ್ರ ವಿಷಯದಲ್ಲೇ ಸಂಶೋಧನೆ ಮಾಡಲು ಬಯಸಿದ್ದಾರೆ. ಸದ್ಯ ಫೆಲೋಶಿಪ್‌ಗೆ ಆಯ್ಕೆಯಾಗಿದ್ದು, ಪಿಎಚ್‌ಡಿ ನಂತರ ಸಂಶೋಧಕಿಯಾಗುವ ಗುರಿ ಹೊಂದಿದ್ದಾರೆ.
ʻಭಾರತೀಯ ವಿಜ್ಞಾನ ಸಂಸ್ಥೆಗೆ ಸೇರಬೇಕು. ಕೆಲವೊಂದು ಆ್ಯಂಟಿ ಬ್ಯಾಕ್ಟೀರಿಯಾ ಕೆಲ ವರ್ಷ ಆದ ನಂತರ ಸತ್ವ ಕಳೆದುಕೊಳ್ಳುತ್ತವೆ. ನಂತರ ಹೊಸತನ್ನು ಕಂಡುಹಿಡಿಯಬೇಕಾಗುತ್ತದೆ. ನಾನೂ ಅದೇ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಹೊಂದಿದ್ದೇನೆ’ ಎನ್ನುತ್ತಾರೆ ಚೈತ್ರಾ.