ಬೆಂಗಳೂರು: ಜು.2ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮದಿನ ಹಾಗಾಗಿ, ಹುಟ್ಟುಹಬ್ಬ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಲ್ಲರಿಗಾಗಿ ಪತ್ರ ಬರೆದಿದ್ದಾರೆ.
ಕೊರೊನಾ ವೈರಸ್ನಿಂದಾಗಿ ಎಲ್ಲ ಕ್ಷೇತ್ರಗಳ ರೀತಿ ಚಿತ್ರರಂಗ ಕೂಡ ತತ್ತರಿಸಿದೆ. ಆರ್ಥಿಕ ನಷ್ಟದ ಹೊಡೆತ ಒಂದುಕಡೆಯಾದರೆ, ಜನರು ಪ್ರಾಣಗಳನ್ನು ಕಳೆದುಕೊಂಡಿರುವ ನೋವು ಇನ್ನೊಂದು ಕಡೆ. ಈ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಬೇಡ ಎಂದು ಮನವಿ ಮಾಡಿದ್ದಾರೆ.
ಪ್ರೀತಿಯ ಅಭಿಮಾನಿ ಗೆಳೆಯರಿಗೆ… ಎಲ್ಲರಿಗೂ ನಿಮ್ಮ ಗಣೇಶ್ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರಿವಿದ್ದು ಅರಿವಿಲ್ಲದೆಯೋ ಈ ಕೊವಿಡ್ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಪ್ರತಿ ವರ್ಷ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿದ್ದೀರಿ. ಆದರೆ ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು ಗೆಳೆಯರು ಬಲಿಯಾಗಿದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನ ನಲುಗಿ ಹೋಗಿದೆ’ ಎಂದು ಗಣೇಶ್ ಹೇಳಿದ್ದಾರೆ.
ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ ಎಂದೆನಿಸಿ, ಈ ವರ್ಷ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ. ಅಲ್ಲದೇ ನಾನು ಜನ್ಮದಿನದಂದು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ.
ಪ್ರತಿ ವರ್ಷವೂ ಹುಟ್ಟುಹಬ್ಬ ಆಚರಣೆಗೆ ಪ್ರೀತಿಯಿಂದ ನೀವು ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೇ ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿ ಇರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಅದೇ ನನಗೆ ಶ್ರೀರಕ್ಷೆ. ಇಂತಿ ನಿಮ್ಮವ ಗಣೇಶ್’ ಎಂದು ಪತ್ರದಲ್ಲಿ ಗೋಲ್ಡನ್ ಸ್ಟಾರ್ ಮನವಿ ಮಾಡಿಕೊಂಡಿದ್ದಾರೆ.
🙏🙏🙏 pic.twitter.com/kiQURh2xZD
— Ganesh (@Official_Ganesh) June 29, 2021