ಬೆಂಗಳೂರು: ನಮ್ಮನ್ನು ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಾನುವಾರ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಶ್ರದ್ದಾಂಜಲಿ ಸಲ್ಲಿಸಲು ನಿರ್ಧರಿಸಲಾಗಿದೆ.
ಭಾನುವಾರ ಸಂಜೆ ಆರು ಗಂಟೆಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಚಿತ್ರ ಪ್ರದರ್ಶಕರ ವಲಯ ಆಯೋಜಿಸಿದೆ. ನಾಗೇಂದ್ರ ಪ್ರಸಾದ್ ಬರೆದ ಹಾಡು ಹಾಡೋ ಮೂಲಕ ಗೀತಾಂಜಲಿ ಸಲ್ಲಿಸಲಾಗುವುದು. ಅಭಿಮಾನಿಗಳು ಎಲ್ಲಿರುತ್ತಾರೋ ಅಲ್ಲಿಯ ಥಿಯೇಟರ್ ಅಂಗಳದಲ್ಲಿ ಕಾರ್ಯಕ್ರಮ ಮಾಡುವರು.
ಕೈಯಲ್ಲಿ ಮೇಣದ ಬತ್ತಿ ಹಿಡಿಯುವ ಮೂಲಕ ಶದ್ಧಾಂಜಲಿ ಸಲ್ಲಿಸಲಾಗುತ್ತದೆ. ನಾಳೆ ಅಭಿಮಾನಿಗಳು ತಾವಿದ್ದ ಸ್ಥಳದಲ್ಲಿಯೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಮ,ನವಿ ಮಾಡಿದ್ದಾರೆ.
ಕಂಠೀರವ ಸ್ಟುಡಿಯೋದ ಅಪ್ಪು ಸಮಾಧಿ ಸ್ಥಳಕ್ಕೆ ಇಂದು ಸಹ ಅಭಿಮಾನಿಗಳು ಆಗಮಿಸಿ ತಮ್ಮ ನಮನಗಳನ್ನು ಸಲ್ಲಿಸುತ್ತಿದ್ದಾರೆ. ವಯೋ ವೃದ್ಧರು, ಮಕ್ಕಳು, ಯುವಕರು ಸೇರಿದಂತೆ ಮಹಿಳೆಯರು ಸಹ ಸಾಲಿನಲ್ಲಿ ಬಂದು ಅಪ್ಪು ದರ್ಶನ ಪಡೆಯುತ್ತಿದ್ದಾರೆ. ಕಣ್ಣೀರು ಹಾಕುತ್ತಲೇ ಅಭಿಮಾನಿಗಳು ಕಂಠೀರವ ಸ್ಟುಡಿಯೋದಿಂದ ಹೊರ ಬರುತ್ತಿದ್ದಾರೆ.
ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅಪ್ಪು ಸಮಾಧಿಗೆ ಭೇಟಿ: ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನಗಳನ್ನು ಸಲ್ಲಿಸಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಪ್ಪು ಅವರನ್ನು ಕಳೆದುಕೊಂಡಿದ್ದೇವೆ ಎಂದು ಈಗಲೂ ನಂಬಲು ಆಗುತ್ತಿಲ್ಲ. ಅವರನ್ನು 15 ದಿನಗಳ ಹಿಂದೆ ಮಾತನಾಡಿಸಿದ್ದೆ. ಫೋನ್ ಮಾಡಿದ್ದಾಗ ಬಾ ಇಮ್ರಾನ್ ಮನೆಗೆ, ಹೊಸ ಪ್ರಾಜೆಕ್ಟ್ ಏನಾದರೂ ಪ್ಲ್ಯಾನ್ ಮಾಡೋಣ ಎಂದಿದ್ದರು ಎಂದು ಭಾವುಕರಾದರು.
ಶೂಟಿಂಗ್ ಹಿನ್ನೆಲೆ ಆವತ್ತು ಗೋವಾದಲ್ಲಿದ್ದೆ. ಹಾಗಾಗಿ ಕಾರಣಾಂತರಗಳಿಂದ ಬರಲು ಆಗಲಿಲ್ಲ. ಪುನೀತ್ ಸರ್ ಜೊತೆ ಸಾಕಷ್ಟು ಪ್ರಾಜೆಕ್ಟ್ ಮಾಡಿದ್ದೇನೆ. ಪುನೀತ್ ಅವರು ತುಂಬಾನೇ ಸರಳ ವ್ಯಕ್ತಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.
ಸಿಎಂ ಬೊಮ್ಮಾಯಿ ಸಂತಾಪ: ಪುನೀತ್ ಅಂತಿಮ ದರ್ಶನ, ವಿಧಿವಿಧಾನಗಳನ್ನು ಯಾವುದೇ ತೊಂದರೆ ಇಲ್ಲದೆ ಸರ್ಕಾರ ನಡೆಸಿಕೊಟ್ಟ ಬಳಿಕ ಶುಕ್ರವಾರ ಸಿಎಂ ಬೊಮ್ಮಾಯಿ ಅವರು ಪುನೀತ್ ಅವರ ಮನೆಗೆ ಭೇಟಿ ನೀಡಿದ್ದರು. ಸಚಿವರಾದ ಆರ್ ಅಶೋಕ್ ಹಾಗೂ ಅಶ್ವಥ್ ನಾರಾಯಣ್ ಜೊತೆಯಲ್ಲಿ ಭೇಟಿ ನೀಡಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಧೈರ್ಯ ತುಂಬಿದರು. ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಅವರ ಪುತ್ರ ಯುವ ರಾಜ್ ಕುಮಾರ್, ಚಿನ್ನೇಗೌಡರು ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸಿಎಂ, ನಾವೆಲ್ಲರೂ ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ಇಂದಿಗೆ 8 ದಿನಗಳು ಆಯ್ತು. ಇಂದು ಅವರ ಕುಟುಂಬ ಸದಸ್ಯರಿಗೆ ನಾವೆಲ್ಲರೂ ಸಾಂತ್ವನ ಹೇಳಿದ್ದೀವಿ. ಮುಂದೆ ಆಗಬೇಕಿರುವ ಹಲವು ಕಾರ್ಯಕ್ರಮ ಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರ ಕುಟುಂಬ ಸದಸ್ಯರು ಕುಳಿತು ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ ಎಂದರು.
ನಟ ಸೂರ್ಯ ಕಣ್ಣೀರು: ಇದು ದೇವರು ಮಾಡಿದ ಅನ್ಯಾಯ, ಅಪ್ಪು ಅಗಲಿಕೆ ಸಹಿಸಲಾಗದು. ಅಣ್ಣಾವ್ರು ನನಗೆ ಮಾದರಿಯಾಗಿದರು. ನನಗೆ ನಾಲ್ಕು ತಿಂಗಳು ಇದ್ದಾಗ, ಅಪ್ಪುಗೆ ಏಳು ತಿಂಗಳು. ನಮ್ಮ ಹಳೆಯ ಫೋಟೋಗಳಲ್ಲಿ ಅಪ್ಪು ಯಾವಾಗಲೂ ನಗುತ್ತಿದ್ದರು. ಈಗ ನಮ್ಮ ಹೃದಯಗಳಲ್ಲಿ ಅಪ್ಪು ನಗುತ್ತಾರೆ ಎಂದರು.
ಎಲ್ಲ ಕನ್ನಡಿಗರಿಗೂ ನಾನು ಏನು ಹೇಳಬೇಕೋ ತೋಚುತ್ತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಮತ್ತು ಧೈರ್ಯ ನೀಡಲಿ ಎಂದು ನಟ ಸೂರ್ಯ ಕಣ್ಣೀರು ಹಾಕಿದರು. ಸಮಾಧಿ ಸ್ಥಳದಿಂದ ನೇರವಾಗಿ ಪುನೀತ್ ನಿವಾಸಕ್ಕೆ ತೆರಳಿದ ಸೂರ್ಯ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.