ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಕಾಲೆಳೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, ಒಲಿಂಪಿಕ್ಸ್ ಸ್ಪರ್ಧಿಗಳ ಜೊತೆ ಚಹಾ ಸೇವಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚಾಟಿ ಬೀಸಿದೆ.
ಕ್ರೀಡಾಪಟುಗಳ ಬೆವರಿನಲ್ಲಿ ನಿಮ್ಮ ಪ್ರಚಾರದ ಬಯಕೆ ತೀರಿಸಿಕೊಂಡು ಚಹಾ ಸೇವಿಸುವ ನರೇಂದ್ರ ಮೋದಿ ಅವರೇ ಕ್ರೀಡೆಗೆ ತಾವು ಅಷ್ಟು ಗೌರವಿಸುವುದಾದರೆ, ನಿಮ್ಮದೇ ಸರ್ಕಾರದ ಸಚಿವೆ ಸ್ಮೃತಿ ಇರಾನಿ ಕ್ರೀಡಾಪಟುವಿಗೆ ಲಂಚದ ಬೇಡಿಕೆ ಇಟ್ಟ ಪ್ರಕರಣದ ತನಿಖೆ ನಡೆಸಲಿಲ್ಲ ಏಕೆ ಎಂದು ಪ್ರಶ್ನಿಸಿದೆ.
ಹೀಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಒಮ್ಮೆ ವರ್ತಿಕಾ ಸಿಂಗ್‌ರೊಂದಿಗೂ ಚಹಾ ಸೇವಿಸಿ ಅವರ ಅಳಲು ಕೇಳಿ ನೋಡೋಣ ಎಂದು ಮೋದಿ ಅವರನ್ನು ಚೇಡಿಸಿದೆ.
ಒಂದೇ ತಿಂಗಳ ಅಂತರದಲ್ಲಿ ಅಡುಗೆ ಅನಿಲದ ಬೆಲೆ ಮತ್ತೊಮ್ಮೆ 25 ರೂ. ಏರಿಕೆಯಾಗಿದೆ. ಈಮೂಲಕ ಸಾವಿರದ ಗಡಿ ತಲುಪಿದೆ. ಬೆಲೆ ಏರಿಕೆಯಿಂದ ಎಲ್‌ಪಿಜಿ ಗ್ರಾಹಕರು ಕಡಿಮೆಯಾಗಿದ್ದನ್ನು ಮನಗಂಡು ಮತ್ತಷ್ಟು ಗ್ರಾಹಕರನ್ನು ಸೆಳೆದು ಕೊಡಲು “ಉಜ್ವಲ 2.0” ಎಂದಿದ್ದರು. ಅನಿಲ ಕಂಪನಿಗಳ ಮಾರ್ಕೆಟಿಂಗ್ ಏಜೆಂಟ್ ನರೇಂದ್ರ ಮೋದಿ ಅವರು, ಇದೇನಾ ಅಚ್ಛೆ ದಿನ್ ಎಂದು ಪ್ರಶ್ನಿಸಿದೆ.