ಬೆಂಗಳೂರು: ನಮ್ಮ ದೇಶ ಭಾರತದಲ್ಲಿ ನಡೆದಿರುವ ಯಾವುದೇ ಹಗರಣಗಳು ಇದುವರೆಗೂ ತಾರ್ಕಿಕ ಅಂತ್ಯ ಕಂಡಿಲ್ಲ, ಜತೆಗೆ ಬಲಾಡ್ಯರು ಮಾಡಿದ ತಪ್ಪಿಗೆ ಶಿಕ್ಷೆಯೂ ದೊರೆತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಜನಧನ್ ಖಾತೆಯಿಂದ 6,000 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಬೇಕು ಎಂಬ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಸಲಹೆಗೆ ಅವರು ಪ್ರತಿಕ್ರಿಯಿಸಿದರು.
ನಾನು ಈ ವಿಷಯವನ್ನು ಎತ್ತಿದ್ದರಿಂದ ಅದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸತ್ಯಾಸತ್ಯತೆ ಹೊರತರಲು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದು ಜೆಡಿಎಸ್ ಕಾರ್ಯಾಗಾರ ಜನತಾ ಸಂಗಮದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎಲ್ಲ ದೊಡ್ಡ ಹಗರಣಗಳ ಭವಿಷ್ಯವು ಒಂದೇ ಆಗಿರುತ್ತದೆ, ಸಣ್ಣ ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗುತ್ತದೆ ಮತ್ತು ದೊಡ್ಡ ವ್ಯಕ್ತಿಗಳು ತಪ್ಪಿಸಿಕೊಳ್ಳುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಗಣಿಗಾರಿಕೆ ಲಂಚ ವಿಚಾರದಲ್ಲಿ 150 ಕೋಟಿ ರೂ.ಗಳ ಆಧಾರ ರಹಿತ ಆರೋಪ ಮಾಡಿದರು, ಆದರೆ ಅಂತಹ ಯಾವುದೇ ಹಗರಣಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ದೇಶದಲ್ಲಿ ಬಡವ ಬಲ್ಲಿದರೆಲ್ಲರಿಗೂ ಒಂದೇ ಕಾನೂನಿದೆ ಆದರೆ, ಬಲಿತರು ಆ ಕಾನೂನಿನಿಂದ ತಪ್ಪಿಕೊಳ್ಳುತ್ತಾರೆ. ಬಡವರು ಸಿಲುಕಿಕೊಂಡು ಶಿಕ್ಷೆ ಅನುಭವಿಸುತ್ತಾರೆ. ಇದು ನಿಜಕ್ಕೂ ದುರೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.