ಬೆಂಗಳೂರು: ಇದೇ ಸೆಪ್ಟೆಂಬರ್ 13ರಿಂದ ಸೆ.24ರ ವರೆಗೆ ನಡೆಯಲಿರುವ ವಿಧಾನಸಭೆಯ ಕಲಾಪವನ್ನು ಸುಗಮವಾಗಿ ನಡೆಸುವುದಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಲು ಮುಖ್ಯಮಂತ್ರಿ, ವಿಪಕ್ಷದ ನಾಯಕರೂ ಸೇರಿದಂತೆ ಹಲವು ಸದಸ್ಯರನ್ನು ಒಳಗೊಂಡಿರುವ ನೀತಿ ನಿರೂಪಣಾ ಸಮಿತಿಯನ್ನು ರಚಿಸಲಾಗಿದೆ ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಕಲಾಪವನ್ನು ಸುಗಮವಾಗಿ ನಡೆಸುವುದಕ್ಕೆ ಅಗತ್ಯ ನಿಯಮಗಳನ್ನು ರಚಿಸಬೇಕಿದೆ. ನೀತಿ ನಿರೂಪಣಾ ಸಮಿತಿಯ ಸಹಕಾರದಲ್ಲಿ ಈ ಕೆಲಸ ಮಾಡಲಾಗುವುದು ಎಂದರು.
ಇದೇ 13ರಿಂದ ಹತ್ತು ದಿನಗಳ ಕಾಲ ವಿಧಾನಸಭೆಯ ಅಧಿವೇಶನ ನಡೆಯುತ್ತಿದೆ. ಆರು ತಿಂಗಳ ಬಳಿಕ ಅಧಿವೇಶನ ನಡೆಸಲಾಗುತ್ತಿದೆ. ಕೋವಿಡ್ ನಿಯಂತ್ರ ಣಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸದನದ ಕಲಾಪ ನಡೆಸಲು ಅಗತ್ಯ ಸಿದ್ಧ ತೆಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಂಟಿ ಅಧಿವೇಶನ: ಜಂಟಿ ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಆಹ್ವಾನ ನೀಡಲಾಗುವುದು. ಶಾಸನಸಭೆಗಳಲ್ಲಿ ಸದಸ್ಯರು ವರ್ತಿಸಬೇಕಾದ ರೀತಿ ಕುರಿತು ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಅಧಿವೇಶನದ ಕೊನೆಯ ದಿನವಾದ ಸೆಪ್ಟೆಂಬರ್ 24ರಂದು ಅರ್ಧದಿನ ಜಂಟಿ ಅಧಿವೇಶನ ನಡೆಸಲಾಗುವುದು. ಶಾಸನ ಸಭೆಗಳ ಕಲಾಪದಲ್ಲಿ ಗದ್ದಲ, ಅಹಿತಕರ ಘಟನೆ ತಡೆಯುವ ಕುರಿತು ಜಂಟಿ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.
ಹಾಜರಿ ಕಡ್ಡಾಯ: ಕಲಾಪದ ಅವಧಿಯಲ್ಲಿ ಮುಖ್ಯ ಮಂತ್ರಿ ಮತ್ತು ಎಲ್ಲ ಸಚಿವರು ಹಾಜರಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಅಧಿವೇಶನದ ಅವಧಿಯಲ್ಲಿ ಯಾವುದೇ ಇತರ ಕಾರ್ಯಕ್ರಮ ನಿಗದಿಪಡಿಸಿ ಕೊಳ್ಳಬಾರದು. ಸಚಿವರು ರಜೆ ಅರ್ಜಿ ಸಲ್ಲಿ ಸಬಾರದು. ನೆಪು ಹೇಳಿ ಕಲಾಪಕ್ಕೆ ಗೈರಾಗುವಂತಿಲ್ಲ ಎಂದು ಕಾಗೇರಿ ಹೇಳಿದರು.
ಕಲಾಪದ ಅವಧಿಯಲ್ಲಿ ಅಧಿಕಾರಿಗಳ ಹಾಜರಾತಿ ಕಡ್ಡಾಯ. ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸಿದ ಶಾಸಕರಿಗೆ ಅತ್ಯುತ್ತಮ ಶಾಸಕ ಪ್ರ ಶಸ್ತಿ ನೀಡಲಾಗುವುದು. ಪ್ರಶ್ನೋತ್ತರ ಅವಧಿಯನ್ನು ನಿರ್ದಿಷ್ಟ ವಾಗಿ ಅದೇ ಉದ್ದೇಶಕ್ಕೆ ಮೀಸಲಿಡಲು ಕೆಲವು ನಿಯಗಳನ್ನು ರೂಪಿಸಲಾಗಿದೆ ಎಂದರು.
ಸಾರ್ವಜನಿಕರ ವೀಕ್ಷಣೆಗೆ ಅವಕಾಶ: ಕೋವಿಡ್ ಕಾರಣದಿಂದ ವಿಧಾನಸಭೆಯ ಕಲಾಪ ವೀಕ್ಷಣೆಗೆ ಸಾರ್ವಜನಿಕರು ಬರುವುದನ್ನು ನಿರ್ಬಂ ಧಿಸಲಾಗಿತ್ತು . ಈ ಬಾರಿ ಸಾರ್ವಜನಿಕರ ವೀಕ್ಷಣೆಗೆ ಅನುಮತಿ ನೀಡಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
ಆದರೆ, ಕೋವಿಡ್ ಸೋಂಕು ಪೂರ್ಣ ಪ್ರಮಾಣದಲ್ಲಿ ಇನ್ನೂ ನಿಯಂತ್ರ ಣಕ್ಕೆ ಬಂದಿಲ್ಲ . ಆದ್ದರಿಂದ ಶಾಲಾ ಮಕ್ಕಳನ್ನು ಕಲಾಪ ವೀಕ್ಷಣೆಗೆ ಕರೆತರಬಾರದು ಎಂದು ಮನವಿಮಾಡಿದರು.