ಮುಂಬೈ: ನಮ್ಮನ್ನು ಸರ್ಕಾರಿ ನೌಕರರೆಂದು ಘೊಷಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಗಳ ಈಡೇರಿಕೆಗಾಗಿ ಮಹಾರಾಷ್ಟ್ರ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೆ1002 ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಾರಿಗೆ ಸಂಸ್ಥೆಗಳನ್ನು ಸರ್ಕಾರದ ಸಾರಿಗೆ ಇಲಾಖೆಯೊಂದಿಗೆ ವಿಲೀನಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಅಕ್ಟೋಬರ್ 28ರಲ್ಲಿ ಆರಂಭವಾದ ಮುಷ್ಕರ ನಿರಂತರವಾಗಿ ಮುಂದುವರಿದಿದೆ. ಈ ಮುಷ್ಕರವನ್ನು ಪ್ರಶ್ನಿಸಿ ಸಾರಿಗೆ ನಿಗಮ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಮುಷ್ಕರ ಕೈಬಿಡುವಂತೆ ನೌಕರರ ಸಂಘಟನೆಗಳಿಗೆ ಸೂಚಿಸಿತ್ತು. ನ್ಯಾಯಾಲಯ ಆದೇಶದ ಹೊರತಾಗಿಯೂ ತಮ್ಮ ಬೇಡಿಕೆಗಳ ಈಡೇರಿಸುವವರೆಗೂ ನಾವು ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ನೌಕರರು ಮುಷ್ಕರ ಮುಂದುವರಿಸಿದ್ದಾರೆ.
ಮುಷ್ಕರಕ್ಕೂ ಮುನ್ನ ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳ ಜೊತೆ ನಡೆದ ಸಭೆಯಲ್ಲಿ ಸಾರಿಗೆ ಸಚಿವರು ನಿಗಮವನ್ನು ಸರ್ಕಾರದೊಂದಿಗೆ ವಿಲೀನ ಮಾಡುವ ಬೇಡಿಕೆಗೆ ಸಮ್ಮತಿಸಿರಲಿಲ್ಲ. ಉಳಿದಂತೆ ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸ್ಪಂದಿಸಿದೆ. ಹೀಗಾಗಿ ನೀವು ಮುಷ್ಕರವನ್ನು ಕೈಬಿಟ್ಟು ಸೇವೆ ಮರಳಿ ಎಂದು ತಿಳಿಸಿದ್ದರು. ಆದರೆ, ನೌಕರರು ಮಾತ್ರ ತಮ್ಮ ಪಟ್ಟನ್ನು ಸಡಿಲಿಸಿಲ್ಲ.
ಬುಧವಾರ ಬಾಂಬೆ ಹೈಕೋರ್ಟ್ ನಿರ್ದೇಶನದಂತೆ ನವೆಂಬರ್ 3 ರ ಮಧ್ಯರಾತ್ರಿಯಿಂದ ಮುಂದಿನ ಆದೇಶದವರೆಗೆ ಉದ್ದೇಶಿತ ರ‍್ಯಾಲಿಗಳು, ಮುಷ್ಕರಗಳು ಅಥವಾ ಕೆಲಸವನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸದಂತೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಉದ್ಯೋಗಿಗಳಿಗೆ ತಿಳಿಸಿತು.
ಆದರೆ, ಎಂಎಸ್‌ಆರ್‌ಟಿಸಿ ನೌಕರರು ನಮ್ಮನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು ಅಲ್ಲಿಯವರೆಗೂ ಮುಷ್ಕರ ನಿಲ್ಲಿಸುವುದರಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಮಾತ್ರ ಮುಷ್ಕರವನ್ನು ಹತ್ತಿಕ್ಕುವ ಆಲೋಚನೆಯಲ್ಲಿ ತೊಡಗಿದೆ. ಆದರೆ ಅದಾವುದಕ್ಕೂ ಜಗ್ಗದೆ ಸಾರಿಗೆ ಸಂಘಟನೆಗಳು ನೌಕರರ ಬೇಡಿಕೆ ಈಡೇರಿಸುವವರೆಗೆ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿವೆ.
ಇನ್ನು ಸಾರಿಗೆ ನಿಗಮವನ್ನು ವಿಲೀನಗೊಳಿಸುವಂತೆ ಕೋರಿ ಮುಷ್ಕರ ನಡೆಸಲಾಗುತ್ತಿದೆ. ನಮ್ಮ ನೌಕರರ ಪ್ರಮುಖ ಬೇಡಿಕೆಯೇ ನಿಗಮವನ್ನು ಸರ್ಕಾರದೊಂದಿಗೆ ವಿಲೀನ ಮಾಡಬೇಕು ಎಂಬುದಾಗಿದೆ. ದೇಶದಲ್ಲೇ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ ದೊಡ್ಡ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಸುಮಾರು 16 ಸಾವಿರ ಬಸ್‍ಗಳಿದ್ದು, 93 ಸಾವಿರ ಚಾಲಕ ಹಾಗೂ ನಿವಾರ್ಹಕರಿದ್ದಾರೆ. ಪ್ರತಿ ದಿನ 65 ಲಕ್ಷ ಪ್ರಯಾಣಿಕರ ನಿಗಮದ ಸೇವೆ ಬಳಕೆ ಮಾಡುತ್ತಿದ್ದಾರೆ.
ಹೀಗಿದ್ದರೂ ಸರ್ಕಾರ ತಾರತಮ್ಯತೆ ಮಾಡುತ್ತಿದ್ದು, ನಮಗೆ ಬರಬೇಕಾದ ನ್ಯಾಯಯುತ ವೇತನವನ್ನು ಕೊಡುತ್ತಿಲ್ಲ. ಇದರಿಂದ ನಮ್ಮ ಕುಟುಂಬ ನಿರ್ವಾಹಣೆ ಕೂಡ ಕಷ್ಟವಾಗುತ್ತಿದೆ. ಆದ್ದರಿಂದ ನಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ನೌಕರರು ಖಡಕ್ಕಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.