ಬೆಂಗಳೂರು: ಮುಷ್ಕರದ ವೇಳೆ ವಜಾಗೊಂಡಿದ್ದ ಬಿಎಂಟಿಸಿಯ 6ನೇ ಘಟಕದ ನೌಕರನೊಬ್ಬ ಘಟಕದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ (ಇಂದು) ಬೆಳಗ್ಗೆ 10ಗಂಟೆ ಸುಮಾರಿನಲ್ಲಿ ನಡೆದಿದೆ.
ಬಿಎಂಟಿಸಿ 6ನೇ ಘಟಕದ ಚಾಲಕ ಕೇಶವ ಎಂಬುವರೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವವರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್‌ನಲ್ಲಿ ಮುಷ್ಕರ ನಡೆಸುತ್ತಿದ್ದ ವೇಳೆ ನೌಕರರ ಮೇಲೆ ಯಾವುದೇ ಕಾರಣ ನೀಡದೆ ಅಮಾನುಷವಾಗಿ ನಡೆದುಕೊಂಡಿರುವ ಸಾರಿಗೆ ಆಡಳಿತ ವರ್ಗ ಏಕಾಏಕಿ ವಜಾ, ಅಮಾನತು, ವರ್ಗಾವಣೆ ಸೇರಿದಂತೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಇನ್ನಿಲ್ಲದ ಕಿರುಕುಳವನ್ನು ನೀಡುತ್ತಿದೆ.
ಇದರಿಂದ ಮನನೊಂದ ಅದೆಷ್ಟೋ ನೌಕರರು ಈಗಾಗಲೇ ಜೀವವನ್ನು ಕಳೆದುಕೊಂಡಿದ್ದಾರೆ. ಆದರೂ ಅಧಿಕಾರಿಗಳಿಗೆ ನೌಕರರ ಮೇಲೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ಹೀಗಾಗಿ ಇಂದು ಕೂಡ ಚಾಲಕ ಕೇಶವ ಅಧಿಕಾರಿಗಳ ಕಿರುಕುಳ ನಡೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಿಸಾಲಗಿದೆ.
ಇಂದು ಬೆಳಗ್ಗೆ ಕೆಲ ದಾಖಲೆಗಳನ್ನು ತರುವಂತೆ ಘಟಕದ ಅಧಿಕಾರಿಗಳು ವಜಾಗೊಂಡಿರುವ ನೌಕರರಿಗೆ ತಿಳಿಸಿದ್ದಾರೆ. ಅದರಂತೆ ನೌಕರರು ಘಟಕಕ್ಕೆ ದಾಖಲೆಗಳನ್ನು ತಂದಿದ್ದಾರೆ. ಆ ವೇಳೆ ಏನು ವಿಚಾರ ಚರ್ಚೆ ಆಗಿದೆಯೋ ಗೊತ್ತಿಲ್ಲ.
ಘಟಕಕ್ಕೆ ಬಂದ ವಜಾಗೊಂಡಿರುವ ಚಾಲಕ ಕೇಶವ ನಂತರ ಘಟಕದ ಗೇಟ್ ಬಳಿಗೆ ಹೋಗಿ ವಿಷ ಸೇವಿಸಿದ್ದಾನೆ. ಇದರಿಂದ ಗಾಬರಿಗೊಂಡ ಸಹೋದ್ಯೋಗಿ ಚಾಲಕರು ತಕ್ಷಣ ಘಟಕದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಬಳಿಕ ಚಾಲಕನನ್ನು ಸಹೋದ್ಯೋಗಿ ಚಾಲಕರೇ ಆಟೋ ಮಾಡಿಕೊಂಡು ಬೌರಿಂಗ್ ಆಸ್ಪತ್ರೆಗೆ ಕರೆತಂದು ಸೇರಿಸಿದ್ದಾರೆ. ಈ ವೇಳೆ ಘಟಕದ ಅಧಿಕಾರಿಗಳು ಘಟಕದ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರನ್ನು ಕಳುಹಿಸಿದ್ದಾರೆ.
ಇನ್ನು ತಮ್ಮ ಘಟಕದ ಚಾಲಕ ವಿಷ ಸೇವಿಸಿದ್ದರೂ ಒಬ್ಬ ಮಹಿಳಾ ಸಿಬ್ಬಂದಿಯನ್ನು ಕಳುಹಿಸಿದ್ದು, ಬಿಟ್ಟರೆ ಮತ್ತೆ ಯಾವ ಅಧಿಕಾರಿಗಳು ಆಸ್ಪತ್ರೆಗೆ ಬಂದು ಆರೋಗ್ಯದ ಸ್ಥಿತಿ ಹೇಗಿದೆ ಎಂದು ವಿಚಾರಿಸಿಲ್ಲ. ಇದನ್ನು ಗಮನಿಸಿದರೆ ಅಧಿಕಾರಿಗಳು ನೊಂದ ಚಾಲಕರ ಬಗ್ಗೆ ಯಾವ ರೀತಿಯ ಧೋರಣೆ ಹೊಂದಿದ್ದಾರೆ ಎಂಬುವುದು ತಿಳಿಯುತ್ತದೆ.
ಘಟಕಗಳಲ್ಲಿ ಹಿಂಸೆ ನೀಡುವ ಮೂಲಕ ಚಾಲಕರನ್ನು ಜೀತದಾಳುಗಂತೆ ನಡೆಸಿಕೊಳ್ಳುವ ಅಧಿಕಾರಿಗಳು ಇಂಥ ಸಮಯದಲ್ಲಾದರೂ ಮಾನವೀಯತೆ ಮೆರೆಯಬಹುದಿತ್ತಲ್ಲವೇ? ಈಗಲೂ ಚಾಲನಾ ಸಿಬ್ಬಂದಿಯನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡುತ್ತಿರುವುದು ಅಧಿಕಾರಿಗಳ ದರ್ಪಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ವಿಷ ಸೇವಿಸಿರುವ ಚಾಲಕನ ಸ್ಥಿತಿಗಂಭೀರವಾಗಿದ್ದು, ಈಗಲೇ ಏನನ್ನು ಹೇಳಲು ಸಾದ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈಗಲಾದರೂ ಸಾರಿಗೆ ನೌಕರರ ಪ್ರಾಣ ಉಳಿಸಲು ಸರ್ಕಾರ ಮತ್ತು ಸಾರಿಗೆ ಸಚಿವರು ಇತ್ತ ಗಮನಹರಿಸಬೇಕಿದೆ. ಜತೆಗೆ ನೌಕರರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವ ಕೆಲ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಸಾರಿಗೆ ಯೂನಿಯನ್‌ಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ನೌಕರರ ಪ್ರಾಣ ತೆಗೆಯುತ್ತಿರುವ ಆಡಳಿತ ವರ್ಗ: ಸಾರಿಗೆ ನೌಕರರ ಜೀವವನ್ನೇ ಹಿಂಡಲು ಮುಂದಾಗಿರುವ ಸಾರಿಗೆ ಆಡಳಿತ ವರ್ಗ ನೌಕರರ ಜೀವಕ್ಕೆ ಮೂರು ಕಾಸಿನ ಬೆಲೆಯೂ ಇಲ್ಲ ಎಂಬಂತೆ ವರ್ತಿಸುತ್ತಿದೆ. ಇದು ಪ್ರಜಾ ಪ್ರಭುತ್ವದ ಕಗ್ಗೊಲೆ ಮಾಡಿದಂತೆ ಅಲ್ಲವೆ. ಇಂಥ ಅಧಿಕಾರಿಗಳಿಂದ ಇನ್ನೆಷ್ಟು ನೌಕರರು ಮತ್ತು ನೌಕರರ ಕುಟುಂಬಗಳ ಪ್ರಾಣ ಹೋಗಬೇಕೋ….? ಅಧಿಕಾರಿಗಳ ಈ ನಡೆಗೆ ಧಿಕ್ಕಾರವಿರಲಿ…. ಧಿಕ್ಕಾರ…