ಬೆಂಗಳೂರು: ಇಪ್ಪತ್ತೊಂಬತ್ತು ಶಾಸಕರು ನೂತನ ಸಚಿವರಾಗಿ ಸೇರ್ಪಡೆಗೊಳ್ಳುವುದರೊಂದಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಂಪುಟ ಬಲ ಇಂದು ಮೂವತ್ತಕ್ಕೆ ಏರಿದೆ.
ರಾಜಭವನದ ಗಾಜಿನ ಮನೆಯಲ್ಲಿ ಇಂದು ಮಧ್ಯಾಹ್ನ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಧ್ಯಾಹ್ನ 2.15ರಿಂದ 3.26 ಸುಮಾರು 71ನಿಮಿಷಗಳು ನಡೆದ ಈ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಡಾ ಉಮೇಶ್ ಜಾಧವ್ ಒಳಗೊಂಡಂತೆ ಗಣ್ಯಾತಿ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದು, ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಮಾಣವಚನ ವಿಶೇಷತೆ
ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಬಹುತೇಕ ಶಾಸಕರು ತಮ್ಮ ಕೊರಳಿಗೆ ಕೇಸರಿ ಅಂಗ ವಸ್ತ್ರವನ್ನು ತೊಟ್ಟಿದ್ದರು. ಬಂಜಾರ ಸಮುದಾಯದ ಆಕರ್ಷಕ ಉಡುಗೆ ತೊಟ್ಟ ಪ್ರಭು ಚವ್ಹಾಣ್ ಅವರು ತಮ್ಮ ಉಡುಗೆ-ತೊಡುಗೆಯಿಂದ ಸೇರಿದ ಗಣ್ಯಾತಿಗಣ್ಯರ ಗಮನ ಸೆಳೆದರು. ಜತೆಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ 29 ಮಂದಿಯಲ್ಲಿ ಇವರೇ ಕೇಂದ್ರ ಬಿಂದುವಾಗಿದ್ದರು.
ಇನ್ನು ಶಶಿಕಲಾ ಜೊಲ್ಲೆ ಅವರು ಏಕೈಕ ಮಹಿಳಾ ಸದಸ್ಯರಾಗಿ ಸಚಿವ ಸಂಪುಟ ಸೇರಿದ್ದಾರೆ. ಇನ್ನು ಪ್ರಮುಖವಾಗಿ ಎಲ್ಲಾ ಸಚಿವರೂ ಕನ್ನಡದಲ್ಲಿಯೇ ಹಾಗೂ ಬಹುತೇಕ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಒಂದು ವಿಶೇಷ.
ಮುರುಗೇಶ್ ನಿರಾಣಿ ಹಾಗೂ ಶಂಕರ್ ಪಾಟೀಲ್ ಮುನೇನ ಕೊಪ್ಪ ಅವರು ದೇವರ ಜತೆಗೆ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಅರೆಬೈಲ್ ಶಿವರಾಂ ಹೆಬ್ಬಾರ್ ಹಾಗೂ ಶಶಿಕಲಾ ಜೊಲ್ಲೆ ಅವರು ದೇವರ ಜತೆಗೆ ಕ್ಷೇತ್ರದ ಜನರ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಬಂಜಾರ ಸಮುದಾಯದ ಆಕರ್ಷಕ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದಿದ್ದ ಪ್ರಭು ಚೌವ್ಹಾಣ್ ಅವರು ಗೋಮಾತೆ ಹಾಗೂ ಸಂತ ಸೇವಾಲಾಲ್, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಜಗಜ್ಯೋತಿ ಬಸವೇಶ್ವರ ಹಾಗೂ ರೈತರ ಹೆಸರಿನಲ್ಲಿ ಮತ್ತು ಆನಂದ್ ಸಿಂಗ್ ವಿಜಯನಗರದ ಪಂಪ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.