ಮೈಸೂರು: ಜನ ಸಂಕಷ್ಟದಲ್ಲಿರುವಾಗ ಶಂಖ ಊದಿಕೊಂಡು ಹೋದರೆ ಸ್ವರಾಜ್ಯ ಸಿಗುತ್ತಾ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯ ಜನಸ್ವರಾಜ್ ಸಮಾವೇಶವನ್ನು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಜೆಡಿಎಸ್ ನಲ್ಲಿ ಶಂಖ ಊದುವುದಕ್ಕೂ ಯಾರೂ ಇಲ್ಲದಂತಾಗಿದೆ. ನಾವು ಗ್ರಾಮೀಣಾಭಿವೃದ್ಧಿಯ ಶಂಖ ಊದುತ್ತಿದ್ದೇವೆ. ಅಭಿವೃದ್ಧಿಯ ಶಂಖ ಊದುತ್ತಿದ್ದೇವೆ, ನಮ್ಮ ಬಳಿ ಜನ ಇದ್ದಾರೆ ಅವರ ಬಳಿ ಜನರೇ ಇಲ್ಲ, ವಿಧಾನಪರಿಷತ್ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲುತ್ತಾರೆ ನೋಡೋಣ ಎಂದು ಕುಟುಕಿಸರು.
ಜನಸ್ವರಾಜ್ ಯಾತ್ರೆ ಹೆಸರಿನಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ. ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು ಅಣಕಿಸಬೇಡಿ. ಕೃಷಿ ಕಾಯ್ದೆ ವಾಪಸ್ ಪಡೆದೆವು ಎಂದು ಬೀಗುತ್ತಾ ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಸರಕಾರವು ಅಧಿಕಾರ ರಾಜಕಾರಣದಲ್ಲಿ ಮುಳುಗಿ ಮನುಷ್ಯತ್ವ ಮರೆಯಬಾರದು ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಎಚ್‌ಡಿಕೆ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು ಅಣಕಿಸಬೇಡಿ: ಮಾಜಿ ಸಿಎಂ ಎಚ್‌ಡಿಕೆ
ಜುಲೈ-ನವೆಂಬರ್ʼನಲ್ಲಿ 7.31 ಲಕ್ಷ ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ಮಳೆ ಪಾಲಾಗಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ, ಹಳೆ ಮೈಸೂರು, ಬಯಲು ಸೀಮೆ ಸೇರಿ ರಾಜ್ಯದ ಉದ್ದಗಲಕ್ಕೂ ಮಳೆಯ ರುದ್ರನರ್ತನ ಮುಂದುವರಿದೆ.
ಇದರಿಂದ ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ. ಚಿಕ್ಕಮಗಳೂರು, ಕೊಡಗಿನಲ್ಲಿ ಕಾಫಿ ತೋಟಗಳು ಪೂರ್ಣ ನಾಶವಾಗಿವೆ. ಬಯಲುಸೀಮೆ ಜಿಲ್ಲೆಗಳಲ್ಲಿ ಮಳೆ ಪ್ರಳಯವನ್ನೇ ಸೃಷ್ಟಿಸಿದೆ. ಕೆರೆಕಟ್ಟೆಗಳು ಒಡೆದುಹೋಗಿ ಗ್ರಾಮಗಳಿಗೆ ಸಂಪರ್ಕವೇ ತಪ್ಪಿಹೋಗಿದೆ. ಹಳ್ಳಿಗಳು ನಡುಗಡ್ಡೆಗಳಾಗಿವೆ. ತೋಟಗಳು ಕೆರೆಗಳಾಗಿವೆ.
ಕೋಲಾರ ಜಿಲ್ಲೆ ಒಂದರಲ್ಲೇ ಅತಿ ಹೆಚ್ಚು ಬೆಳೆ ನಾಶವಾಗಿದೆ. ಮಾಧ್ಯಮಗಳಿಗೆ ಅಧಿಕಾರಿಗಳೇ ಕೊಟ್ಟಿರುವ ಮಾಹಿತಿಯಂತೆ ಆ ಒಂದು ಜಿಲ್ಲೆಯಲ್ಲೇ 34,447 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ಮಳೆ ನುಂಗಿದೆ. 14 ಜಿಲ್ಲೆಗಳಲ್ಲಿ 48,000 ಹೆಕ್ಟೇರ್ʼಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಫಸಲು ರೈತರ ಕೈಗೆ ಸಿಕ್ಕಿಲ್ಲ ಆದರೆ ಸರ್ಕಾರ ಶಂಖ ಊದಿಕೊಂಡು ಹೋಗುತ್ತಿದೆ ಎಂದು ಎಚ್‌ಡಿಕೆ ಟೀಕಿಸಿದ್ದರು.