ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಷ್ಕರದ ವೇಳೆ ವಜಾ ಮಾಡಿರುವ ನೌಕರರಿಗೆ ಕ್ವಾರ್ಟರ್ಸ್ ಖಾಲಿ ಮಾಡಬೇಕು ಎಂದು ಅಂತಿಮ ನೋಟಿಸ್ ನೀಡಿರುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಸಲ್ಲಿಸಿರುವ ಪಿಟಿಷನ್ ಅರ್ಜಿಯನ್ನು ಮಾನ್ಯ ಮಾಡಿರುವ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ತೀರ್ಪನ್ನು ಸೋಮವಾರಕ್ಕೆ (ಆ23) ಕಾಯ್ದಿರಿಸಿದೆ.
ಶನಿವಾರ ಬೆಳಗ್ಗೆ ನ್ಯಾಯಾಲಯದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಬಿಎಂಟಿಸಿ ನೌಕರ ಜಯಪ್ರಕಾಶ್ ಅವರ ಪರ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರು ನೋಟಿಸಿ ನೀಡುವುದಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಿದರು. ಆ ಪಿಟಿಷನ್ ಅರ್ಜಿಯನ್ನು ಸಿಟಿ ಸಿವಿಲ್ ನ್ಯಾಯಾಲಯದ 56ನೇ ಕೋರ್ಟ್ ಹಾಲ್‌ನ ನ್ಯಾಯಾಧೀಶರಾದ ಕೃಷ್ಣಮೂರ್ತಿ ಆರ್. ಪಡಸಲಗಿ ಅವರಿದ್ದ ನ್ಯಾಯಪೀಠ ಮಾನ್ಯ ಮಾಡಿತು.
ನಂತರ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ ಬಿಎಂಟಿಸಿ ನೌಕರ ಜಯಪ್ರಕಾಶ್ ಪರ ವಕೀಲ ಶಿವರಾಜು ಅವರು ಸುಮಾರು ಒಂದು ಗಂಟೆ ಕಾಲ ಮಂಡಿಸಿದ ವಾದವನ್ನು ಆಲಿಸಿ, ತೀರ್ಪನ್ನು ಆಗಸ್ಟ್ 23ಕ್ಕೆ ಕಾಯ್ದಿರಿಸಿತು.
ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರದ ವೇಳೆ 3 ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಲಾಗಿದೆ. ಈ ನಡುವೆ ಕ್ವಾರ್ಟರ್ಸ್ ಖಾಲಿ ಮಾಡಬೇಕು ಎಂದು ಬಿಎಂಟಿಸಿ ಅಧಿಕಾರಿಗಳು ಅಂತಿಮ ನೋಟಿಸ್ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಇತರರ ವಿರುದ್ಧ ನೌಕರ ಜಯಪ್ರಕಾಶ್ ಎಂಬುವರು ನ್ಯಾಯಾಲಯದಲ್ಲಿ ಇಂದು ಅರ್ಜಿಸಲ್ಲಿಸಿದ್ದಾರೆ.
ಏನೂತಪ್ಪು ಮಾಡದ ನಮ್ಮನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿದ್ದು ಅಲ್ಲದೇ ಈಗ ಕ್ವಾರ್ಟರ್ಸ್ ಖಾಲಿ ಮಾಡುವಂತೆ ಒತ್ತಡ ಹೇರುತ್ತಿರುವ ಅಧಿಕಾರಿಗಳ ವಿರುದ್ಧ ಸದ್ಯಕ್ಕೆ ಜಯ ಪ್ರಕಾಶ್ ಅವರು ಸಮರ ಸಾರಿದ್ದು ಮಾಡು ಇಲ್ಲವೇ ಮಡಿ ಎಂಬ ಹೋರಾಟಕ್ಕೆ ದುಮುಕಿದಂತ್ತಾಗಿದೆ.