ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರದ ವೇಳೆ 3 ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಿದ್ದು, ಈಗ ವಾಸವಿರುವ ಮನೆ (ಕ್ವಾರ್ಟರ್ಸ್) ಖಾಲಿ ಮಾಡಬೇಕು ಎಂದು ಅಂತಿಮ ನೋಟಿಸ್ ನೀಡಿರುವ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಇತರರ ವಿರುದ್ಧ ಜಯಪ್ರಕಾಶ್ ಎಂಬುವರು ನ್ಯಾಯಾಲಯದಲ್ಲಿ ಇಂದು ಅರ್ಜಿಸಲ್ಲಿಸುತ್ತಿದ್ದಾರೆ.
ಶನಿವಾರ ಬೆಳಗ್ಗೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಅರ್ಜಿ ಸಲ್ಲಿಸಲಾಗುವುದು. ಇನ್ನು ಬಿಎಂಟಿಸಿ ನೌಕರ ಜಯಪ್ರಕಾಶ್ ಅವರ ಪರ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರು ವಕಾಲತ್ತು ವಹಿಸುತ್ತಿದ್ದಾರೆ.
ಮುಷ್ಕರದ ವೇಳೆ ವಜಾ ಮಾಡಿರುವ ನೌಕರರಿಗೆ ಕ್ವಾರ್ಟರ್ಸ್ ಖಾಲಿ ಮಾಡುವಂತೆ ಇಲಾಖೆ ನೋಟಿಸ್ ನೀಡಿದ್ದು, ಅದಕ್ಕೆ ತಡೆಯಾಜ್ಞೆ ತರಲು ಇಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿದೆ. ಈ ಮೂಲಕ ಏನೂತಪ್ಪು ಮಾಡದ ನಮ್ಮನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿದ್ದು ಅಲ್ಲದೇ ಈಗ ಕ್ವಾರ್ಟರ್ಸ್ ಖಾಲಿ ಮಾಡುವಂತೆ ಒತ್ತಡ ಹೇರುತ್ತಿರುವ ಅಧಿಕಾರಿಗಳ ವಿರುದ್ಧ ಸಮರ ಸಾರಲು ನೌಕರರು ಒಬ್ಬೊಬ್ಬರಾಗಿ ಮುಂದಾಗುತ್ತಿದ್ದಾರೆ.
ನೌಕರ ಜಯಪ್ರಕಾಶ್ ಮತ್ತು ಅವರ ಕುಟುಂಬದವರು ವಕೀಲರ ಕಚೇರಿಗೆ ಗುರುವಾರ ರಾತ್ರಿ 11ಗಂಟೆಯಲ್ಲಿ ಭೇಟಿನೀಡಿ ವಕೀಲ ಶಿವರಾಜು ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರಿಂದ ವಕೀಲರು ಶುಲ್ಕ ರಹಿತವಾಗಿ ಅವರ ಪ್ರಕರಣವನ್ನು ಕೈ ಗೆತ್ತಿಕೊಂಡಿದ್ದಾರೆ.
ಕೆಲ ಸಾರಿಗೆ ನೌಕರರು ವಸತಿ ಗೃಹದಲ್ಲಿ ಇದ್ದಾರೆ. ಆ ಎಲ್ಲ ನೌಕರರಿಗೆ ಏ.7ರಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರು ಅನಿರ್ದಿಷ್ಟ ಕಾಲ ಮುಷ್ಕರ ನಡೆಸಿದ್ದರಿಂದ ಇಲಾಖೆಯ ಹಿರಿಯ ಅಧಿಕಾರಿಗಳು ವಸತಿ ಗೃಹ ಖಾಲಿ ಮಾಡಸಲು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಾಗಿದೆ. ಮತ್ತೆ ಈಗ ದುಪ್ಪಟ್ಟು ಬಾಡಿಗೆ ಕಟ್ಟಬೇಕು ಎಂದು ಬೆದರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.