ದಾವಣಗೆರೆ: ನಾವು 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ಕೊಟ್ಟು ಪರೀಕ್ಷೆ ಬರೆದಿದ್ದೆವು, ಆದರೆ, ಅವರು ಯಾವ ಎಕ್ಸಾಂ ಬರೆದಿದ್ದಾರೆ ಗೊತ್ತಿಲ್ಲ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಗೆ ಆರೋಗ್ಯ ಸಚಿವ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗಾರರ ಮುಂದೆ ಬಂದು ಬಂದು ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂದು ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ನಾವು ಪರೀಕ್ಷೆ ಬರೆದಿದ್ದೆವು, ಬಳಿಕ ಪಾಸ್ ಆಗಿ ಸಚಿವರಾಗಿದ್ದೇವೆ. ಯೋಗೇಶ್ವರ್ ಯಾವ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ. ಆದರೂ ಅವರು ಸಚಿವರಾಗಿದ್ದಾರೆ ಎಂಬ ಅರ್ಥದಲ್ಲಿ ಯೋಗೇಶ್ವರ್ ಅವರಿಗೆ ಅವರ ಧಾಟಿಯಲ್ಲೇ ವ್ಯಂಗ್ಯವಾಗಿ ಹೇಳಿಕೆ ಕೊಟ್ಟರು.
ಇನ್ನು ರಮೇಶ್ ಜಾರಕಿಹೊಳಿ, ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲ್ಲ ಎಂದು ಹೇಳಿದ್ದೆ, ಕೊಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕೊರೊನಾ ಲಸಿಕೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕಕ್ಕೆ ಎರಡೂವರೆ ಕೋಟಿ ಲಸಿಕೆ ಸುಳ್ಳು ಲೆಕ್ಕಾನಾ, ದೇಶದಲ್ಲಕ 38 ಕೋಟಿ ಜನಕ್ಕೆ ಲಸಿಕೆ ನೀಡಲಾಗಿದ್ದು, ಅಮೆರಿಕದಲ್ಲಿ ಎಷ್ಟು ಕೊಟ್ಟಿದ್ದಾರೆ ಕೇಳಿ ಒಮ್ಮೆ, ಸಿದ್ದರಾಮಯ್ಯನವರಿಗೆ ಸುಳ್ಳು ಲೆಕ್ಕ ಹೇಳುವ ಅಭ್ಯಾಸ ಇರಬೇಕು ಎಂದು ತಿರುಗೇಟು ನೀಡಿದರು.
ಇನ್ನು ರಾಜ್ಯಕ್ಕೆ ಲಸಿಕೆ ಹೆಚ್ಚು ಮಾಡಲಿಕ್ಕೆ ನಾನು ದೆಹಲಿಗೆ ಹೋಗಿದ್ದೆ, ಈ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. 250 ಪಿಎಚ್ ಸಿ ಮೇಲ್ದರ್ಜೆಗೆ ಏರಿಸಲಾಗುವುದು, ಐದು ವರ್ಷದಲ್ಲಿ ಮೇಲ್ದರ್ಜೆಗೆ ಉದ್ದೇಶ ಹೊಂದಲಾಗಿದೆ. ಇದರ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದೆ ಎಂದರು.