ಬೆಂಗಳೂರು: ಕಳೆದ ಏಪ್ರಿಲ್‌ನಲ್ಲಿ ನಡೆದಂತಹ ಸಾರಿಗೆ ಮುಷ್ಕರದ ಅವಧಿಯಲ್ಲಿ ಬಹಳಷ್ಟು ನಮ್ಮ ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳು ದಾಖಲಿಸಲಾಗಿದ್ದು ಈ ಎಲ್ಲ ಪ್ರಕರಣಗಳನ್ನು 10-12 ದಿನದಲ್ಲಿ ವಾಪಸ್ ಪಡೆಯದಿದ್ದರೆ ಸೆಪ್ಟೆಂಬರ್ 20ರಿಂದ ಮತ್ತೆ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರ ಸರ್ವ ಸಂಘಟನೆಗಳ ಮುಖಂಡರು ತೀರ್ಮಾನಿಸಿದ್ದಾರೆ.
ಸಮಸ್ಯೆಗಳಿಗೆ ಒಳಗಾಗಿರುವ ನೌಕರರ ಬದುಕನ್ನು ಸರಿಪಡಿಸುವ ಕುರಿತು ಹೋರಾಟದ ರೂಪುರೇಷೆ ಸಿದ್ಧಪಡಿಸಲು ಪೂರ್ಣಿಮಾ ಟಾಕೀಸ್ ಹಿಂಭಾಗದ ಎಸ್ಸಿ ಎಸ್ಟಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾರಿಗೆ ಎಲ್ಲ ನೌಕರರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸೆ.20ರಂದು ಬಹುತೇಕ ಎಲ್ಲ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ಮಾಡುವುದಾಗಿ ನಿರ್ಧರಿಸಿವೆ.
ಇನ್ನು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಹೋರಾಟ ನಡೆಸುವ ಬಗ್ಗೆ ಯೋಚಿಸಲಾಗಿದ್ದು, ಒಂದು ವೇಳೆ ಅವರು ಸಂಘಟನೆಗಳ ಜತೆ ಕೈ ಜೋಡಿಸಲಿದ್ದರೆ, ಸಿಐಟಿಯುನ ರೇವಪ್ಪ ಅವರ ನೇತೃತ್ವದಲ್ಲಿ ಮುಂದಿನ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಇಂದಿನ ಸಭೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ನಿರ್ಧರಿಸಿದ್ದಾರೆ.
ಇದರ ಜತೆಗೆ ಇಂದು ಸಭೆಗೆ ಗೈರಾಗಿರುವ ಎಐಟಿಯುಸಿ, ಮಹಾಮಂಡಲ, ಬಿಎಂಎಸ್, ಸಾರಿಗೆ ನೌಕರರ ಕೂಟ ಸೇರಿದಂತೆ ಸಾರಿಗೆಯ 27 ಸಂಘಟನೆಗಳ ಮುಖಂಡರನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಕೆಎಸ್‌ರ್‌ಆರ್‌ಟಿಸಿ ಯುನಿಟೆಡ್ ಎಂಪ್ಲಾಯ್ ಯೂನಿಯನ್ ಅಧ್ಯಕ್ಷ ವಿಜಯಕುಮಾರ್ ಅವರಿಗೆ ಜವಾಬ್ದಾರಿಯನ್ನು ಇಂದಿನ ಸಭೆಯಲ್ಲಿ ವಹಿಸಿದ್ದು, ಅವರು ಎಲ್ಲ ಸಂಘಟನೆಗಳ ಮುಖಂಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿ ಬಳಿಕ ಇದೇ ಸೆ.13ರಂದು ಮತ್ತೆ ಸಭೆ ಸೇರುವ ಬಗ್ಗೆಯೂ ತೀರ್ಮಾನ ತೆಗದುಕೊಳ್ಳಲಾಗಿದೆ.
ಹೀಗಾಗಿ ಸೆ.13ರಂದು ಮತ್ತೆ ಸಾರಿಗೆಯ ಎಲ್ಲ ಸಂಘಟನೆಗಳ ಮುಖಂಡರು ಸಭೆ ಸೇರಲಿದ್ದು ಆ ಸಭೆಯಲ್ಲಿಯೂ ನೌಕರರ ಪರ ಮಹತ್ವದ ತೀರ್ಮಾನ ತೆಗದುಕೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತವಾಯಿತು.
ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳನ್ನು ದಾಖಲಿಸಿರುವ ಬಗ್ಗೆ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿಕೊಡುವಂತೆ ಹಲವಾರು ಸಂಘಟನೆಗಳ ನಾಯಕರು ಹಲವಾರು ಬಾರಿ ಸರ್ಕಾರದ ಮುಖ್ಯ ಮಂತ್ರಿಗಳು, ಮಂತ್ರಿಗಳು, ಸಾರಿಗೆ ಸಚಿವರ ಗಮನಕ್ಕೆ ತಂದು ಸರಿಪಡಿಸಿಕೊಡುವಂತೆ ಮನವಿ ಮಾಡಲಾಗಿದೆ. ಆದಾಗ್ಯೂ ಇದುವರೆಗೂ ಯಾವೊಬ್ಬ ನೌಕರನು ಸಮಸ್ಯೆಯಿಂದ ಹೊರ ಬರಲಾಗಿಲ್ಲ.
ಯಾವುದೇ ಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾಡಿಕೊಡುತ್ತೇವೆ ಎನ್ನುವ ಭರವಸೆ ಗಳಲ್ಲಿಯೇ ಐದು ತಿಂಗಳು ಕಳೆದು ಹೋಯಿತು. ಇನ್ನೂ ಹೀಗೆ ತಿಂಗಳುಗಟ್ಟಲೇ ಮುಂದುವರಿದರೆ ನಮ್ಮ ಹಲವಾರು ನೌಕರರ ಪರಿಸ್ಥಿತಿ ತೀರ ತಳ ಮಟ್ಟಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ.
ಹಾಗಾಗಿ ಸಾರಿಗೆ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಗಳು ಈ ಒಂದು ಸಭೆ ನಡೆಸಿದ್ದು ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಸಾರಿಗೆ ಅಡಳಿತ ಮಂಡಳಿ ಜತೆ ಒಂದು ಸುತ್ತಿನ ಮಾತುಕತೆ ನಡೆಸಿ ಎಲ್ಲವನ್ನು ಸರಿಪಡಿಸುವ ಬಗ್ಗೆಯೂ ತೀರ್ಮಾನಿಸಲಾಗಿದೆ.
ಇಂದಿನ ಸಭೆಯಲ್ಲಿ ಕೆಬಿಎನ್, ಯುನಿಟೆಡ್ ಎಂಪ್ಲಾಯ್ ಯೂನಿಯನ್, ಮುಸ್ಲಿಂ ಸಂಘಟನೆ, ಕನ್ನಡ ಸಮನ್ವಯ ಸಂಘ, ಬಿಎಂಟಿಸಿ ಒಕ್ಕಲಿಗ ಸಂಘ ಸೇರಿದಂತೆ ಬಹುತೇಕ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು.