ಕಾರವಾರ: ಮುಖ್ಯಮಂತ್ರಿಗಳ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸುವುದು ಸಾಮಾನ್ಯ ವಿಚಾರವಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರದ್ದೋ ವೈಯಕ್ತಿಕ ವಿಡಿಯೋವೊಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಆ ವಿಡಿಯೋ ಅನ್ನು ವಿಧಾನಪರಿಷತ್ ಸದಸ್ಯರಿಗೆ ಹಾಗೂ ಸಚಿವರಿಗೆ ಕೊಟ್ಟಿದ್ದ ಮಾಹಿತಿ 2-3 ತಿಂಗಳ ಹಿಂದೆ ಬಂದಿತ್ತು. ಇದನ್ನು ಮುಂದಿಟ್ಟುಕೊಂಡು ವಿಧಾನಪರಿಷತ್ ಸದಸ್ಯರು, ಸಚಿವರಿಬ್ಬರೂ ಸೇರಿ ಸಿಎಂ ಹಾಗೂ ಸಂತೋಷ್ ಇಬ್ಬರಿಗೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆ ಎಂದು ಕೇಳಿದ್ದೆ. ಅದರ ಸತ್ಯಾಂಶಗಳೇನೆಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಆ ವಿಡಿಯೋದಲ್ಲಿ ಗುಪ್ತ ಮಾಹಿತಿಯೇನೋ ಅಡಗಿದೆ. ಹಾಗಾಗಿ ಈ ಕುರಿತು ತನಿಖೆಯಾಗಬೇಕಿದೆ. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಆದರೆ, ಈ ತನಿಖೆಯು ರಾಜ್ಯ ಸರ್ಕಾರದಿಂದ ಆಗಬಾರದು ಎಂದು ತಿಳಿಸಿದ್ದಾರೆ.
ಈ ನಡುವೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪ್ರತಿಕ್ರಿಯಿಸಿ, ಯಾರದ್ದೋ ವೈಯಕ್ತಿಕ ವಿಡಿಯೋವೊಂದು ಎಂದು ಡಿಕೆಶಿ ಹೇಳುತ್ತಿದ್ದಾರಲ್ಲ ಅದರ ಕಾಪಿ ಇದ್ದರೆ ಬಹಿರಂಗಪಡಿಸಿ, ಅದನ್ನು ಬಿಟ್ಟು ಈ ರೀತಿ ಕೆಟ್ಟರಾಜಕಾರಣವನ್ನು ಮಾಡಬಾರದು. ನಾವು ದಬುಕ್ಕಿದ್ದೀವಿ ಎಂದು ತೋರಿಸಿಕೊಳ್ಳುವುದಕ್ಕೆ ಇಂಥ ಕೆಟ್ಟರಾಜಕಾರಣಮಾಡಬಾರದು ಎಂದು ಹೇಳಿದರು.
ಇನ್ನು ಅದ್ಯಾರೋ ಶಾಸಕರು ಮತ್ತು ಸಚಿವರು ಇದ್ದಾರೆ ಎಂದು ಹೇಳಿದ್ದಾರಲ್ಲ ಅವರ ಹೆಸರನ್ನಾದರೂ ಹೇಳಿ. ಅದನ್ನು ಬಿಟ್ಟು ಸುಮ್ಮನೇ ಈ ರೀತಿ ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡಬಾರದು ಎಂದು ತಿಳಿಸಿದರು.